ಭೂತಕೋಲದ ಬಗ್ಗೆ ಹೇಳಿಕೆ: ನಟ ಚೇತನ್ ಅಹಿಂಸಾ ವಿರುದ್ಧದ ಕೇಸ್ ವಜಾಗೊಳಿಸಲು ಹೈಕೋರ್ಟ್ ನಕಾರ

Update: 2022-11-23 17:11 GMT

ಬೆಂಗಳೂರು, ನ.23: ಭೂತದ ಕೋಲ ಹಿಂದು ಧರ್ಮದ ಭಾಗವಲ್ಲ ಎಂಬ  ಹೇಳಿಕೆ ನೀಡಿದ್ದ ನಟ ಚೇತನ್ ಅಹಿಂಸಾ ವಿರುದ್ಧ ದಾಖಲಾದ ಪ್ರಕರಣವನ್ನು ವಜಾಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. 

ಈ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಚೇತನ್ ಅಹಿಂಸಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕೇಸ್‍ನ್ನು ವಜಾಗೊಳಿಸಲು ನಿರಾಕರಿಸಿದೆ.  

ಕಾಂತಾರ ಸಿನಿಮಾದ ವಿಚಾರದಲ್ಲಿ ಮಾತನಾಡಿದ್ದ ಚೇತನ್ ಅವರು 'ಭೂತಾರಾಧನೆ ಹಿಂದು ಸಂಸ್ಕೃತಿ' ಎಂಬ ನಿರ್ದೇಶಕ ರಿಷಬ್ ಶೆಟ್ಟಿ ಅವರ ಹೇಳಿಕೆಯನ್ನು ಅಕ್ಷೇಪಿಸಿದ್ದರು. ಈ ಬಗ್ಗೆ ಟ್ವಿಟ್ ಮಾಡಿದ್ದ ಅವರು, ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು. ಇವು ವೈದಿಕ ಬ್ರಾಹ್ಮಣೀಯ ಹಿಂದು ಧರ್ಮಕ್ಕಿಂತ ಹಿಂದಿನವು ಮೂಲ ನಿವಾಸಿ ಸಂಸ್ಕೃತಿ ಯನ್ನು ಪರದೆಯ ಮೇಲೆ ಮತ್ತು ಹೊರಗೆ ಸತ್ಯವಾಗಿ ಪ್ರದರ್ಶಿಸಬೇಕು ಎಂದು ನಾನು ಕೋರುತ್ತೇನೆ ಎಂದು ಹೇಳಿದ್ದರು.

ಈ ಹೇಳಿಕೆಯ ಬಳಿಕ ಚೇತನ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ನಂತರ ಬೆಂಗಳೂರಿನಲ್ಲಿ ಶಿವಕುಮಾರ್ ಎಂಬುವರು ಶೇಷಾದ್ರಿಪುರ ಠಾಣಿಯಲ್ಲಿ ಕೇಸ್ ದಾಖಲಿಸಿದ್ದರು. ಅದರಂತೆ ಐಪಿಸಿ ಸೆಕ್ಷನ್ 505 ಅಡಿ ಎಫ್‍ಐಆರ್ ದಾಖಲಾಗಿತ್ತು. ಈ ಎಫ್‍ಐಆರ್ ಅನ್ನು ರದ್ದುಗೊಳಿಸಿ ಕೇಸನ್ನು ವಜಾಗೊಳಿಸುವಂತೆ ಕೋರಿ ಚೇತನ್ ಅಹಿಂಸಾ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು.

ಸಮಾಜದಲ್ಲಿ ಅಶಾಂತಿ ಮೂಡಿಸಿದ ಆರೋಪವನ್ನು ಹೊರಿಸಿ ಈ ಎಫ್‍ಐಆರ್ ದಾಖಲಾಗಿತ್ತು. ಪ್ರಕರಣ ಇನ್ನೂ ತನಿಖಾ ಹಂತದಲ್ಲಿರುವ ಹಿನ್ನೆಲೆಯಲ್ಲಿ ಪ್ರಕರಣ ರದ್ದು ಮಾಡದಂತೆ ಶಿವಕುಮಾರ್ ಅವರ ಪರವಾಗಿ ಕೋರ್ಟ್‍ನಲ್ಲಿ ವಾದ ಮಾಡಲಾಗಿತ್ತು. ನಟ ಚೇತನ್ ಅವರ ಮನವಿಯನ್ನು ಪುರಸ್ಕರಿಸಬಾರದು. ಅರ್ಜಿ ವಜಾ ಮಾಡಬೇಕು ಎಂದು ಸರಕಾರಿ ವಕೀಲರ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ನ್ಯಾಯಪೀಠವು  ಚೇತನ್ ಅಹಿಂಸಾ ಅವರ ವಿರುದ್ಧದ ಪ್ರಕರಣವನ್ನು ವಜಾಗೊಳಿಸಲು ನಿರಾಕರಿಸಿದೆ.

Similar News