ಕಾಂಗ್ರೆಸ್ ಗೆ ಅಧಿಕಾರ ನೀಡಬಾರದೆಂದು ಜನ ತೀರ್ಮಾನಿಸಿದ್ದಾರೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-11-23 17:50 GMT

ದಾವಣಗೆರೆ, ನ. 23 : ಕಾಂಗ್ರೆಸ್ ನವರ ಐದು ವರ್ಷದ ಆಡಳಿದಿಂದ ಬೇಸತ್ತು ಅವರಿಗೆ ಮತ್ತೆ ಅಧಿಕಾರ ನೀಡಬಾರದು ಎಂದು ಜನ ತೀರ್ಮಾನಿಸಿದ್ದಾರೆ ಎಂದು ತಿಳಿಸಿದರು.

ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಇಂದು ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.

''ಕಾಂಗ್ರೆಸ್ ಪಕ್ಷದ 5 ವರ್ಷದ ಅಧಿಕಾರಾವಧಿಯಲ್ಲಿ ಜಗಳೂರನ್ನು ನಿರ್ಲಕ್ಷ್ಯ ಮಾಡಿದೆ. ಮೈತ್ರಿ ಸರ್ಕಾರವೂ ನಿರ್ಲಕ್ಷ ತೋರಿದೆ‌.ಕಾಂಗ್ರೆಸ್ ನವರು ಜನರಿಗೆ ಕೇವಲ ಮಾತಿನಿಂದ ನೀರು ಕುಡಿಸಿದ್ದರು.ಆದರೆ ಮನೆಗಳಿಗೆ ನೀರು ಮಾತ್ರ ಬಂದಿರಲಿಲ್ಲ. ಏನೂ ಮಾತನಾಡದೆ ಜನರ ಕೆಲಸ ಮಾಡುತ್ತಿರುವುದು ಬಿಜೆಪಿ ಸರ್ಕಾರ. ಕಾಂಗ್ರೆಸ್ ನವರು ಸುಳ್ಳು ಆಶ್ವಾಸನೆಗಳನ್ನು ನೀಡಿದರು. ಕಾಂಗ್ರೆಸ್ ಯಾವ ಭಾಗ್ಯ ಯೋಜನೆಯೂ ಜನರನ್ನು ತಲುಪಲಿಲ್ಲ. ಅನ್ನ ಭಾಗ್ಯ, ಎಸ್ ಸಿ ಎಸ್ಟಿ ಹಾಸ್ಟೆಲ್ ಗಳ ದಿಂಬು ಹಾಸಿಗೆ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಸಾಮಾಜಿಕ ನ್ಯಾಯದ ಬಗ್ಗೆ  ಮಾತನಾಡಿದರು. ಮೀಸಲಾತಿ ಹೆಚ್ಚಳದ 50 ವರ್ಷದ ಬೇಡಿಕೆಯನ್ನು ಕಾಂಗ್ರೆಸ್ ಈಡೇರಿಸಲಿಲ್ಲ. ಕಾಂಗ್ರೆಸ್ ನಾಯಕರು ತಾವು ಅಧಿಕಾರದಲ್ಲಿ ಇದ್ದಾಗ ಕೆಲಸ ಮಾಡದೆ ಇದ್ದ ಮೀಸಲಾತಿ ಹೆಚ್ಚಳವನ್ನು ಈಗ ನಾವು ಮಾಡಿರುವುದನ್ನು ವಿರೋಧಿಸುತ್ತಾರೆ'' ‌ ಎಂದರು.

ಐದು ವರ್ಷಗಳ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಜನರಿಗೆ ಭ್ರಮನಿರಸನವಾಗಿದೆ : 

''ಅಹಿಂದದ ಬಗ್ಗೆ ಮಾತನಾಡುವ ವರಿಗೆ ಅಧಿಕಾರ ಕೊಟ್ಟು ನೋಡೋಣ ಎಂದು ಎಲ್ಲರಿಗೂ ಆಸೆ ಇತ್ತು. ಆದರೆ ಐದು ವರ್ಷಗಳ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಜನರಿಗೆ ಭ್ರಮನಿರಸನವಾಗಿದೆ.  ಜನಗಣತಿಯ ಸಮೀಕ್ಷೆಯ ಪ್ರಕಾರ ಮೀಸಲಾತಿಯನ್ನು ನೀಡಿ ಎಂದು ಹೋರಾಟ ಮಾಡಿದರೂ  ಪ್ರಯೋಜನವಾಗಿರಲಿಲ್ಲ'' ಎಂದರು. 

ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬೈರತಿ ಬಸವರಾಜ, ಬಿ.ಶ್ರೀರಾಮುಲು, ಸಂಸದರಾದ ಜಿ.ಎಂ.‌ಸಿದ್ದೇಶ್ವರ್, ಶಾಸಕರಾದ ಎಸ್.ವಿ. ರಾಮಚಂದ್ರಪ್ಪ, ಎಂ.ಪಿ. ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಕೆ.ಎಸ್.‌ನವೀನ್ ಹಾಗೂ ಮತ್ತಿತರರು ಹಾಜರಿದ್ದರು.‌

Similar News