ಡಿಜಿಟಲ್ ಮಾಧ್ಯಮ ನಿಯಂತ್ರಿಸಲು ಕಾನೂನು ಜಾರಿಗೆ ಕೇಂದ್ರ ಸಿದ್ದತೆ: ಸಚಿವ ಠಾಕೂರ್

Update: 2022-11-24 06:03 GMT

ಜೈಪುರ: ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸುವ ಮಸೂದೆಯೊಂದನ್ನು ಪರಿಚಯಿಸುವ ನಿಟ್ಟಿನಲ್ಲಿ  ಕೇಂದ್ರ ಸರಕಾರವು ಕೆಲಸ ಮಾಡುತ್ತಿದೆ ಎಂದು ಕೇಂದ್ರ ಮಾಹಿತಿ ಹಾಗೂ  ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ Union Information and Broadcasting Minister Anurag Thakur ಹೇಳಿದ್ದಾರೆ.

ಈ ಹಿಂದೆ ಸುದ್ದಿಗಳ ಏಕಮುಖ ಸಂವಹನವಿತ್ತು, ಆದರೆ ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳ ಅಭಿವೃದ್ಧಿಯೊಂದಿಗೆ, ಸುದ್ದಿಗಳ ಸಂವಹನವು ಬಹು ಆಯಾಮ ಪಡೆದಿದೆ ಎಂದು ಠಾಕೂರ್ ಹೇಳಿದರು.

ಈಗ ಒಂದು ಹಳ್ಳಿಯ ಸಣ್ಣ ಸುದ್ದಿ  ಕೂಡ  ಡಿಜಿಟಲ್ ಮಾಧ್ಯಮದ ಮೂಲಕ ರಾಷ್ಟ್ರೀಯ ವೇದಿಕೆಯನ್ನು  ತಲುಪುತ್ತದೆ. ಸರಕಾರವು ಹೆಚ್ಚಿನ ಮುದ್ರಣ, ಎಲೆಕ್ಟ್ರಾನಿಕ್ ಹಾಗೂ  ಡಿಜಿಟಲ್ ಮಾಧ್ಯಮಗಳನ್ನು ಸ್ವಯಂ ನಿಯಂತ್ರಣಕ್ಕೆ ಬಿಟ್ಟಿದೆ ಎಂದು ಠಾಕೂರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಡಿಜಿಟಲ್ ಮಾಧ್ಯಮವು ಅವಕಾಶಗಳು ಹಾಗೂ  ಸವಾಲುಗಳನ್ನು ಒದಗಿಸುತ್ತದೆ. ಉತ್ತಮ ಸಮತೋಲನವನ್ನು ಹೊಂದಲು  ಈ ಬಗ್ಗೆ ಏನು ಮಾಡಬಹುದೆಂದು ಸರಕಾರವು ಚಿಂತಿಸಲಿದೆ. ಬದಲಾವಣೆಗಳನ್ನು ಕಾನೂನಾಗಿ ತರಬೇಕು ಎಂದು ನಾನು ಹೇಳುತ್ತೇನೆ ಮತ್ತು ನಿಮ್ಮ ಕೆಲಸವನ್ನು ಸರಳಗೊಳಿಸಲು ಹಾಗೂ ಸುಲಭಗೊಳಿಸಲು ಕಾನೂನನ್ನು ತರುತ್ತೇವೆ. ನಾವು ಮಸೂದೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ" ಎಂದು ಹಿಂದಿ ಸುದ್ದಿ ದಿನಪತ್ರಿಕೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಠಾಕೂರ್ ಹೇಳಿದರು.

ಇನ್ನು ಮುಂದೆ ಪತ್ರಿಕೆಗಳ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗುವುದು. ಕೇಂದ್ರ ಸರಕಾರವು 1867 ರ ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಆ್ಯಕ್ಟ್ ಬದಲಿಗೆ ಹೊಸ ಕಾನೂನನ್ನು ಶೀಘ್ರದಲ್ಲೇ ತರಲಿದೆ. ಇದರಿಂದ ಒಂದು ವಾರದಲ್ಲಿ ನೋಂದಣಿಗೆ ಅವಕಾಶ ನೀಡಲಾಗುವುದು. ಇದು ಸದ್ಯ 4  ತಿಂಗಳು ತೆಗೆದುಕೊಳ್ಳುತ್ತದೆ. ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮಕ್ಕೆ ಸಂಬಂಧಿಸಿದ ನೀತಿ ನಿರೂಪಣೆಗಳನ್ನು ಒಂದೇ ಸೂರಿನಡಿ ತರಲಾಗುವುದು ಎಂದು ಠಾಕೂರ್ ಹೇಳಿದರು

Similar News