ಪೊಲೀಸ್ ಸರ್ಪಗಾವಲಿನಲ್ಲಿ "ಟಿಪ್ಪು ನಿಜಕನಸುಗಳು" ನಾಟಕ ಪ್ರದರ್ಶನಗೊಂಡಿರುವುದು ರಂಗಾಯಣಕ್ಕೆ ಮಾಡಿದ ಅಪಮಾನ: ಜನಾರ್ಧನ್

Update: 2022-11-24 08:23 GMT

ಮೈಸೂರು: ನಾಟಕ ಎಂಬುದು ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸುವಂತಹದು. ಆದರೆ ಟಿಪ್ಪು ನಿಜಕನಸುಗಳು ನಾಟಕವನ್ನು  ಪೊಲೀಸ್ ಸರ್ಪಗಾವಲಿನಲ್ಲಿ ನಡೆಸುವ ಮೂಲಕ ಇಡೀ ಸಾಂಸ್ಕೃತಿಕ ಲೋಕವೇ ತಲೆತಗ್ಗಿಸುವಂತೆ ಮಾಡಿ ರಂಗಾಯಣಕ್ಕೆ ಮಾಡಿದ ಅಪಮಾನ, ಇಂತಹ ಘಟನೆ ದೇಶದ ಯಾವ ರಂಗಾಯಣದ ಇತಿಹಾಸದಲ್ಲೂ ನಡೆದಿಲ್ಲ ಎಂದು ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ) ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಟಕ ಎಂಬುದು ಸತ್ಯವನ್ನು ಹೇಳುವಂತಹದು. ಅಂತಹ ನಾಟಕಗಳನ್ನು ಪ್ರದರ್ಶಿಸುವ ಮೂಲಕ ರಂಗಭೂಮಿ ಮತ್ತು ಕಲಾವಿದರ ಗೌರವ ಹೆಚ್ಚಿಸುವಂತೆ ಆಗಬೇಕು. ಆದರೆ ಈಗಿನ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಟಿಪ್ಪು ನಿಜಕನಸುಗಳು ನಾಟಕವನ್ನು ಬರೆದು ಬರೀ ಸುಳ್ಳಗಳನ್ನೇ ಪ್ರದರ್ಶನ ಮಾಡುತ್ತಿರುವುದು ರಂಗಾಯಣದ ದುರ್ದೈವ. ಟಿಪ್ಪು ಕನಸಗಳನ್ನು ಕಂಡಿದ್ದ ಎಂದರೆ  ನಂಬ ಬಹುದು, ಆದರೆ, ಟಿಪ್ಪು ನಿಜಕನಸುಗಳು ಗೊತ್ತಾಗುವುದು ಆತನೊಂದಿಗೆ ಸಂಸಾರ ಮಾಡಿದ್ದರೆ ಮಾತ್ರ. ಈ ಹಿಂದೆ ರಂಗಾಯಣವನ್ನು ಕಾರಂತರು,  ಪ್ರಸನ್ನ, ಚಿದಂಬರ ರಾವ್ ಜಂಬೆ, ಸಿ.ಬಸವಲಿಂಯ್ಯ ಮತ್ತು ನಾನು ಸೇರಿದಂತೆ ಅನೇಕರು ಶ್ರಮ ಪಟ್ಟು ಕಟ್ಟಿದ್ದಾರೆ. ಅಂತಹ ರಂಗಾಯಣ ಇಂದು ತನ್ನ ಘನತೆಯನ್ನು ಕಳೆದುಕೊಳ್ಳುತ್ತಿರುವುದು ಮನಸ್ಸಿಗೆ ನೋವುಂಟು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ನಾಟಕ ಮಾಡಿದರೆ. ಪ್ರೇಕ್ಷಕರನ್ನು ಹಾತೊರೆಯುವಂಗಿರಬೇಕು. ಅದು ಬಿಟ್ಟು ನಾಟಕ ನೋಡಲು ಬರುವವರನ್ನು ಎಲ್ಲಿಂದ ಬಂದೆ. ಹೇಗೆ ಬಂದೆ ಎಂದು ಪೊಲೀಸರ ಮೂಲಕ ಪರಿಶೀಲಿಸಿ ಆವರಣದೊಳಗೆ ಕಳುಹಿಸುವುದಲ್ಲ, ಇವರಿಗೆ ನಿಜವಾಗಲು ತಮ್ಮ ನಾಟಕ ಸರಿಯಾಗಿದೆ ಎನ್ನುವುದಾದರೆ ಪರ ವಿರೋಧ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ನಾನು ರಂಗಾಯಣದ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ.‌ ನನ್ನ ಅವಧಿಯಲ್ಲಿ ಮುಖ್ಯಮಂತ್ರಿಗಳು ನಾಟಕ ನೋಡಲು ರಂಗಾಯಣಕ್ಕೆ ಬಂದಿದ್ದರು. ಆಗ ಪೊಲೀಸರು ಭದ್ರತೆ ದೃಷ್ಟಿಯಿಂದ ರಂಗಾಯಣದ ಆವರಣದಲ್ಲಿ ಬೀಡುಬಿಟ್ಟಿದ್ದರು. ಆಗ ಇದು ಸಾಂಸ್ಕೃತಿಕ ಲೋಕ ಇಲ್ಲಿ ಪೊಲೀಸರ ಅಗತ್ಯವಿಲ್ಲ ಎಂದಾಗ ಅವರು ಪೊಲೀಸರನ್ನು ಅಲ್ಲಿಂದ ವಾಪಸ್ ಕರೆದುಕೊಂಡು ಹೋದರು. ರಂಗಾಯಣದಂತಹ ಪವಿತ್ರ ಭೂಮಿಯಲ್ಲಿ ಪ್ರೇಕ್ಷಕರಿಗೆ  ಪೊಲೀಸರನ್ನು ಜೊತೆಗೆ ಇಟ್ಟು ನಾಟಕ ನೋಡಿಸುವ ದುರಂತ ನಿಜಕ್ಕೂ ನಾಚಿಕೆಗೇಡು.‌ ಇಂತಹ ವ್ಯವಸ್ಥೆಯನ್ನು ರಂಗಾಯಣಕ್ಕೂ ಎಳೆದು ತಂದರಲ್ಲ ಎಂದು ನೋವಾಗುತ್ತಿದೆ ಎಂದರು.

Similar News