ವಿಧಾನ ಸಭೆ ಚುನಾವಣೆ 2023 | ‘ಕೈ’ ಟಿಕೆಟ್‍ಗಾಗಿ 1,230 ಅರ್ಜಿ ಸಲ್ಲಿಕೆ

Update: 2022-11-24 11:57 GMT

 ಬೆಂಗಳೂರು, ನ. 24: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ (Congress) ಟಿಕೆಟ್‍ಗಾಗಿ 1230 ಅರ್ಜಿಗಳು ಸಲ್ಲಿಕೆಯಾಗಿದ್ದು, ಆ ಅರ್ಜಿಗಳಿಂದಲೇ ಪಕ್ಷಕ್ಕೆ ಸರಿಸುಮಾರು 21.19 ಕೋಟಿ ರೂ.ಮೊತ್ತದ ಹಣ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯದ 224 ಕ್ಷೇತ್ರಗಳಿಂದ ಒಟ್ಟು 1311 ಮಂದಿ ಆಕಾಂಕ್ಷಿಗಳು ಟಿಕೆಟ್‍ಗಾಗಿ ಅರ್ಜಿ ಪಡೆದುಕೊಂಡಿದ್ದು, ಆ ಪೈಕಿ 1,230 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದಿಂದ 341 ಹಾಗೂ ಸಾಮಾನ್ಯ ವರ್ಗದಲ್ಲಿ 889 ಅರ್ಜಿಗಳು ಸಲ್ಲಿಕೆಯಾಗಿವೆ.

ಟಿಕೆಟ್ ಆಕಾಂಕ್ಷಿಗಳಿಂದ ನ.1ರಿಂದ 15ರ ವರೆಗೆ ಮೊದಲಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಆ ಬಳಿಕವೂ ಆಕಾಂಕ್ಷಿಗಳು ಹೆಚ್ಚಿನ ಆಸಕ್ತಿ ತೋರಿಸಿದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆ ಅವಧಿಯನ್ನು ನ.21ರ ವರೆಗೆ ವಿಸ್ತರಣೆ ಮಾಡಲಾಗಿತ್ತು. ಅರ್ಜಿ ಸಲ್ಲಿಕೆಗೆ ಎಸ್‍ಸಿ-ಎಸ್‍ಟಿ ವರ್ಗಕ್ಕೆ 1 ಲಕ್ಷ ರೂ. ಹಾಗೂ ಸಾಮಾನ್ಯ ವರ್ಗದವರಿಗೆ 2 ಲಕ್ಷ ರೂ.ಶುಲ್ಕ ನಿಗದಿ ಮಾಡಲಾಗಿತ್ತು.

ಟಿಕೆಟ್ ಅರ್ಜಿಗಳಿಂದ ಸಂಗ್ರಹವಾಗಿರುವ ಮೊತ್ತವನ್ನು ಕೆಪಿಸಿಸಿ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಲು ಉದ್ದೇಶಿಸಲಾಗಿದೆ. ಕೆಪಿಸಿಸಿ ಕಚೇರಿಯ ಹಿಂಭಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಆಗುತ್ತಿದೆ. ಹಣಕಾಸು ಕೊರತೆ ಕಾರಣದಿಂದ ಕಾಮಗಾರಿ ವಿಳಂಬವಾಗಿತ್ತು. ಇದೀಗ ಟಿಕೆಟ್ ಆಕಾಂಕ್ಷಿಗಳಿಂದ ಸಂಗ್ರಹವಾದ  ಮೊತ್ತವನ್ನು ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತದೆ. 

ಹಾವೇರಿಯಿಂದಲೇ 51 ಮಂದಿ ಅರ್ಜಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತವರು ಜಿಲ್ಲೆ ಹಾವೇರಿಯಿಂದ ಕಾಂಗ್ರೆಸ್ ಪಕ್ಷದ ಟಿಕೆಟ್‍ಗಾಗಿ ಒಟ್ಟು 51 ಮಂದಿ ಅರ್ಜಿ ಸಲ್ಲಿಸಿದ್ದು, ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುವ ಶಿಗ್ಗಾಂವಿ ಕ್ಷೇತ್ರದಿಂದಲೇ 15 ಮಂದಿ ಅರ್ಜಿ ಸಲ್ಲಿಕೆ ಮಾಡಿರುವುದು ವಿಶೇಷವಾಗಿದೆ. 

ಇದನ್ನೂ ಓದಿ: ರಾಜ್ಯದ 5 ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿದ ಕಾಂಗ್ರೆಸ್

Similar News