ಮಂಗಳೂರು ಆಟೋ ರಿಕ್ಷಾದಲ್ಲಿ ಸ್ಫೋಟ ಪ್ರಕರಣದ ತನಿಖೆ NIAಗೆ ಎನ್‍ಐಎಗೆ ವರ್ಗಾಯಿಸಲು ಸರಕಾರದ ಶಿಫಾರಸ್ಸು

Update: 2022-11-24 15:05 GMT

ಬೆಂಗಳೂರು, ನ. 24: ಮಂಗಳೂರಿನ ಕಂಕನಾಡಿ ಸಮೀಪ ಇತ್ತೀಚೆಗೆ ನಡೆದ ಕುಕ್ಕರ್ ಸ್ಫೋಟ ಘಟನೆಗೆ ಸಂಬಂಧಿಸಿದಂತೆ, ಮುಂದಿನ ತನಿಖೆಯನ್ನು, ಕೇಂದ್ರ ತನಿಖಾ ಸಂಸ್ಥೆ (ಎನ್‍ಐಎ)ಗೆ ವರ್ಗಾಯಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಈ ಸಂಬಂಧ ಆದೇಶ ಹೊರಡಿಸಿದೆ.

ಗುರುವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ‘ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಯಲ್ಲಿ, ಸಂಗ್ರಹಿಸಲಾದ, ಎಲ್ಲ ಸಾಕ್ಷ್ಯ ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ, ರಾಜ್ಯ ಸರಕಾರ ಈ ನಿರ್ಧಾರ ಕೈಗೊಂಡಿದೆ’ ಎಂದು ಹೇಳಿದ್ದಾರೆ.

‘ಕಾನೂನುಬಾಹಿರ ಚಟುವಟಿಕೆ ತಡೆ(ಯುಎಪಿಎ) ಕಾಯಿದೆ ಅನ್ವಯ ತನಿಖೆಯನ್ನು ನಡೆಸಲು, ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ’ ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಆಟೋರಿಕ್ಷಾದಲ್ಲಿ ಪ್ರಯಾಣಿಕನೋರ್ವ ತೆರಳುತ್ತಿದ್ದ ವೇಳೆ ಏಕಾಏಕಿ ಕುಕ್ಕರ್ ಸ್ಫೋಟಗೊಂಡು ಚಾಲಕ ಹಾಗೂ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಶಂಕಿತ ಆರೋಪಿ ಶಾರೀಕ್ ಹಾಗೂ ರಿಕ್ಷಾ ಚಾಲಕ ಪುರುಷೋತ್ತಮ್ ಪೂಜಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Similar News