ಒಂದೇ ದಿನದೊಳಗೆ ಮಹಿಳಾ ಆಯೋಗದ ದೂರುಗಳ ತನಿಖೆ ಪ್ರಾರಂಭಿಸಿ: ಸಿಎಂ ಬೊಮ್ಮಾಯಿ ಸೂಚನೆ

Update: 2022-11-25 12:35 GMT

ಬೆಂಗಳೂರು, ನ. 25: ‘ಮಹಿಳಾ ಆಯೋಗದಿಂದ ಸ್ವೀಕಾರವಾದ ದೂರುಗಳನ್ನು ಏಳರಿಂದ ಎಂಟು ಗಂಟೆಗಳೊಳಗೆ ನೋಂದಣಿಯಾಗಿ ತನಿಖೆ ಪ್ರಾರಂಭಿಸಬೇಕೆಂದು ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ರಾಜ್ಯ ಮಹಿಳಾ ಆಯೋಗದ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಆಯೋಗಕ್ಕೆ ಸಮರ್ಥ ವಕೀಲರ ನೇಮಕ ಮಾಡಲಾಗುವುದು. ನಿರ್ಭಯ ಯೋಜನೆಯಡಿ ಜಾರಿ ಮಾಡಿರುವ ಕಾನೂನಿನ ಬಗ್ಗೆ ಪುರುಷರಲ್ಲಿ ಅನ್ಯಾಯ ಆಗುವ ಮೂಲದಿಂದಲೇ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಆಯೋಗಕ್ಕೆ ಬಲ: ಮಹಿಳಾ ಆಯೋಗಕ್ಕೆ ಇನ್ನಷ್ಟು ಅಧಿಕಾರದ ಜೊತೆಗೆ ಪರಿಣಾಮಕಾರಿಯಾಗಿ ಕೆಲಸ  ಮಾಡಲು ಅಗತ್ಯ ಮೂಲಭೂತ ಸೌಕರ್ಯಗಳನ್ನು ಸರಕಾರ ಒದಗಿಸಲು ಸಿದ್ದವಿದೆ ಎಂದ ಅವರು, ಮಹಿಳೆಯರ ಪೌಷ್ಟಿಕತೆ ಹೆಚ್ಚಿಸಲು ಕ್ರಮ ವಹಿಸಿದೆ. ಗರ್ಭಿಣಿಯರಿಗೆ ವಿಶೇಷ ಸ್ಥಳ ನಿಗದಿ, 5 ನಗರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಹಿಳೆಯರಿಗೆ ಹಾಸ್ಟೆಲ್, ಐಐಎಂ ತರಬೇತಿ ಸೇರಿ ಹಲವು ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸಲಾಗುತ್ತಿದೆ ಎಂದರು.

‘ನಿರ್ಭಯ ಅಡಿ ಬೆಂಗಳೂರಿನಲ್ಲಿ 7500 ಕೃತಕ ಬುದ್ಧಿಮತ್ತೆಯ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.  ರಾತ್ರಿ ವೇಳೆ ಕೆಲಸ ಮುಗಿಸಿ ಬರುವ ಮಹಿಳೆಯಾರಿಗೆ ಇದು ಸುರಕ್ಷತೆ ಒದಗಿಸುತ್ತದೆ. ಮಹಿಳಾ ಪೊಲೀಸ್ ಒಳಗೊಂಡ ಪಿಂಕ್ ಹೊಯ್ಸಳ ವಾಹನಗಳು ಮಹಿಳೆಯರನ್ನು ರಕ್ಷಿಸಲು ಸಂಚರಿಸುತ್ತವೆ. ಅಲ್ಪಾವಧಿ  ಸ್ವಯಂ ರಕ್ಷಣಾ ತರಬೇತಿಯನ್ನು ಶಾಲಾ ಕಾಲೇಜುಗಳ ಹಾಸ್ಟೆಲ್‍ಗಳಲ್ಲಿ ನೀಡಲಾಗುತ್ತಿದೆ ಎಂದರು. 

ಉಳಿತಾಯ ಸಂಸ್ಕೃತಿ: ವಿಶ್ವದಲ್ಲಿ ಎಲ್ಲ ರಾಷ್ಟೃಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಆದರೆ, ಭಾರತ ಮಹಿಳೆಯರ ಉಳಿತಾಯ ಸಂಸ್ಕೃತಿ ಯಿಂದಾಗಿ ಅಡುಗೆ ಮನೆಯಲ್ಲಿ ತೆಗೆದಿಡುವ ಜೀರಿಗೆ ಡಬ್ಬದಲ್ಲಿ ಇಡುವ ಹಣವೇ ದೇಶದ ಆರ್ಥಿಕತೆ ರಕ್ಷಣೆ ಮಾಡಿದೆ. ತಾಯಿ ಗರ್ಭದಿಂದ ಭೂತಾಯಿ ಗರ್ಭದ ವರೆಗೆ  ಇರುವ ನಮ್ಮ ಬದುಕಿನಲ್ಲಿ ಮಹಿಳೆಯರಿಗೆ ಗೌರವ, ಸಮಾನತೆ ನೀಡಬೇಕು. ದೇಶ ಕಟ್ಟಲು ತಾಯಂದಿರನ್ನು ಸಶಕ್ತ ಮಾಡುವುದು ಮುಖ್ಯ. ಈ ಅರಿವಿನಿಂದ ನಮ್ಮ ಸರಕಾರ ಕೆಲಸ ಮಾಡುತ್ತಿದೆ ಎಂದರು.

‘ಈ ಭೂಮಿ ಮೇಲೆ ಜನ್ಮ ಪೂರ್ವದ ಸಂಬಂಧ ತಾಯಿಯೊಂದಿಗೆ ಇರುತ್ತದೆ. ತಾಯಿತನ ಎಲ್ಲಕ್ಕಿಂತ ಶ್ರೇಷ್ಠ. ತಾಯಿಯ ಪ್ರೀತಿ ಮಿತಿ ಇಲ್ಲದ್ದು, ನೂರುಕ್ಕೆ ನೂರು ಶುದ್ದವಾಗಿರುತ್ತದೆ. ಹೀಗಾಗಿ ಹೆಣ್ಣು ಮಕ್ಕಳು ಶ್ರೇಷ್ಠ ಎಂದು ಅವರು ಬಣ್ಣಿಸಿದರು.

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಶಾಸಕಿ ರೂಪಾಲಿ ನಾಯಕ್, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮಂಜುಳಾ ಹಾಜರಿದ್ದರು.

ಕಠಿಣ ಕಾನೂನು ಕ್ರಮ ಅವಶ್ಯಕ: ‘ಎಲ್ಲ ಸಮಾಜದಲ್ಲಿ ವ್ಯಗ್ರ ಚಿಂತನೆಗಳಿರುವ ವ್ಯಕ್ತಿಗಳಿದ್ದಾರೆ. ಅವರಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಮಹಿಳೆಯರ ಮೇಲೆ ಹಲ್ಲೆ, ಕೊಲೆ, ದೌರ್ಜನ್ಯ ಅತ್ಯಾಚಾರ ಆಗಿರುವುದು ನಾವು ನೋಡುತ್ತಿದ್ದೇವೆ. ಇದು ರಾಕ್ಷಸ ಕೃತ್ಯ. ಉಗ್ರ ಕಾನೂನು ಇದ್ದರೂ, ಶಿಕ್ಷೆಗೆ ಒಳಪಟ್ಟಿದ್ದಾರೆ. ಆದರೆ ಆ ಕಾನೂನು ಅಪರಾಧಗಳನ್ನು ತಡೆಹಿಡಿಯಲು ಸಫಲವಾಗಿಲ್ಲ. ಸಾಮಾಜಿಕ ಚಿಂತನೆ ಬದಲಾವಣೆಯ ಜೊತೆಗೆ ಕಠಿಣ ಕಾನೂನು ಕ್ರಮವೂ ಅವಶ್ಯಕ’ 

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

Similar News