ಶಾಸಕ ಟಿ.ಡಿ.ರಾಜೇಗೌಡ ವಿರುದ್ದ ಅಕ್ರಮ ಆಸ್ತಿ ಖರೀದಿ ಆರೋಪ: 'ಕೆಫೆ ಕಾಫಿ ಡೇ' ಮಾಳವಿಕಾ ಹೆಗ್ಡೆ ಸ್ಪಷ್ಟನೆ ಏನು?

Update: 2022-11-25 12:13 GMT

ಬೆಂಗಳೂರು, ನ. 25: ‘ಬ್ಯಾಂಕಿನ ಸಾಲ ತೀರಿಸಲು ಆಸ್ತಿ ಮಾರಾಟ ಮಾಡುತ್ತಿದ್ದು, ಆ ಪೈಕಿ ನಮ್ಮ ಒಡೆತನದ ಸ್ಥಿರ ಆಸ್ತಿಯನ್ನು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಖರೀದಿಸಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಮೋಸ ಅಥವಾ ಅವ್ಯವಹಾರದ ಪ್ರಶ್ನೆಯೇ ಇಲ್ಲ' ಎಂದು 'ಕೆಫೆ ಕಾಫಿ ಡೇ' ಮಾಲಕ ದಿ. ಸಿದ್ದಾರ್ಥ ಹೆಗ್ಡೆ ಅವರ ಪತ್ನಿ ಮಾಳವಿಕಾ ಹೆಗ್ಡೆ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ಈ ಸಂಬಂಧ ಪ್ರಕಟನೆಯೊಂದನ್ನು ನೀಡಿರುವ ಅವರು, ‘ಅಕ್ರಮವಾಗಿ ಆಸ್ತಿ ಖರೀದಿ ಮಾಡಿದ್ದಾರೆಂದು ಶಾಸಕ ರಾಜೇಗೌಡ ಅವರ ವಿರುದ್ಧದ ಆರೋಪ ಸತ್ಯಕ್ಕೆ ದೂರ. ನಮ್ಮ ಹಾಗೂ ರಾಜೇಗೌಡರ ಕುಟುಂಬದ ಬಾಂಧವ್ಯ ನಾಲ್ಕು ದಶಕಗಳಿಂದ ಇದೆ. ಆದುದರಿಂದ ಈ ವ್ಯವಹಾರದಲ್ಲಿ ಯಾವುದೇ ರೀತಿಯ ಮೋಸಕ್ಕೆ ಅವಕಾಶವಿಲ್ಲ’ ಎಂದು ವಿವರಣೆ ನೀಡಿದ್ದಾರೆ.

ಶಾಸಕ ಟಿ.ಡಿ.ರಾಜೇಗೌಡ ವಿರುದ್ಧದ ಆರೋಪ ಏನು?:  ಜಿಲ್ಲೆಯ ಶೃಂಗೇರಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರು ಕಳೆದ ಚುನಾವಣೆ ಸಂದರ್ಭ ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಕಡಿಮೆ ಆದಾಯ ಘೋಷಿಸಿದ್ದು, ಸದ್ಯ ಅವರು ಸುಮಾರು 200 ಕೋ. ರೂ. ಮೌಲ್ಯದ ಜಮೀನು ಖರೀದಿಸಿದ್ದಾರೆ. ಶಾಸಕ ರಾಜೇಗೌಡ ಅವರು ತಮ್ಮ ಅಧಿಕಾರವಧಿಯಲ್ಲಿ ಕ್ಷೇತ್ರದಾದ್ಯಂತ ವಿವಿಧ ಸರಕಾರಿ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿ ಈ ಜಮೀನು ಖರೀದಿಸಿರುವ ಶಂಕೆ ಇದೆ. ಈ ಅಸ್ತಿ ಖರೀದಿ ಸಂಬಂಧ ಲೋಕಾಯುಕ್ತ ಸಂಸ್ಥೆಗೆ ಕೊಪ್ಪ ತಾಲೂಕಿನ ವಿಜಯಾನಂದ ಎಂಬವರು ದೂರು ನೀಡಿದ್ದು, ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಶಾಸಕರ ವಿರುದ್ಧ ಕೂಡಲೇ ಎಫ್‍ಐಆರ್ ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಡಿ.ಎನ್.ಜೀವರಾಜ್ ಆರೋಪ ಮಾಡಿದ್ದರು. 

ಇದೇ ವಿಚಾರಕ್ಕೆ ಸಂಬಂಧಿಸಿ ರಾಜೇಗೌಡರ ವಿರುದ್ಧ ವಕೀಲರಾದ ವಿಜಯಾನಂದ ಎಂಬುವವರು ಲೋಕಾಯುಕ್ತಕ್ಕೆ ದೂರನ್ನೂ ನೀಡಿದ್ದರು.

ಇದೀಗ ಕಾಫಿ ಡೇ ಮಾಲಕ ದಿ. ಸಿದ್ದಾರ್ಥ ಹೆಗ್ಡೆ ಅವರ ಪತ್ನಿ ಮಾಳವಿಕಾ ಹೆಗ್ಡೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

Similar News