ದೇಶದಲ್ಲಿ ಮನುವಾದ ಮತ್ತು ಸಂವಿಧಾನದ ನಡುವೆ ಸಂಘರ್ಷ ನಡೆಯುತ್ತಿದೆ: ಜ್ಞಾನಪ್ರಕಾಶ್ ಸ್ವಾಮಿ

Update: 2022-11-25 12:54 GMT

ಬೆಂಗಳೂರು, ನ.25: ‘ದೇಶದಲ್ಲಿ ಮನುವಾದ ಮತ್ತು ಅಂಬೇಡ್ಕರ್‍ರ ಸಂವಿಧಾನದ ನಡುವೆ ಸಂಘರ್ಷ ಏರ್ಪಟ್ಟಿದೆ. ಹಾಗಾಗಿ 2023ರ ಚುನಾವಣೆಯ ಮೂಲಕ ಅಂಬೇಡ್ಕರ್ ಸಂವಿಧಾನವನ್ನು ಗೆಲ್ಲಿಸಬೇಕಾಗಿದೆ’ ಎಂದು ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಕರೆ ನೀಡಿದರು.

ಶುಕ್ರವಾರ ಇಲ್ಲಿನ ಪುರಭವನದಲ್ಲಿ ಸಭಾಂಗಣದಲ್ಲಿ ದಸಂಸ ಆಯೋಜಿಸಿದ್ದ ‘ಸಂಕಲ್ಪ ಸಮಾವೇಶ’ದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಸಂವಿಧಾನವನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ. ಹಾಗಾಗಿ ಇಂದಿಗೂ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ. ಆಕಳಿನ ಗಂಜನ್ನು ಕುಡಿಯುವವರು, ದಲಿತರು ಮುಟ್ಟಿದ ನೀರನ್ನು ಕುಡಿಯುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಡೀ ದೇಶವನ್ನು ಸುಳ್ಳಿನ ಸರಮಾಲೆಯಾಗಿ ಮಾಡಿದ್ದಾರೆ. ಭಾರತದ ಸಂಸತ್ ಸುಳ್ಳನ್ನು ಹೇಳುವ ಸಂಸತ್ ಆಗಿದೆ. ಹಾಗಾಗಿ ದೇಶದಲ್ಲಿ ಕ್ಷಣಕ್ಷಣಕ್ಕೂ ದೌರ್ಜನ್ಯಗಳು ನಡೆಯುತ್ತಿವೆ ಎಂದ ಅವರು, ಎಲ್ಲ ದೇಶದಲ್ಲಿ ನೀರಿನಿಂದ ಸಗಣಿಯನ್ನು ತೊಳೆದರೆ, ನಮ್ಮ ದೇಶದಲ್ಲಿ ಮಾತ್ರ ಸಗಣಿಯಿಂದ ನೀರನ್ನು ತೊಳೆಯುತ್ತಾರೆ ಎಂದು ಅವರು ಕಿಡಿಕಾರಿದರು.

ಸಂವಿಧಾನ ಅನುಷ್ಟಾನವಾದ ಮರುದಿನ ಸಂವಿಧಾನದ ವಿರುದ್ಧವಾಗಿ ಆರ್ಗನೈಜರ್ ಪತ್ರಿಕೆಯಲ್ಲಿ ಬರೆಯಲಾಗಿದೆ. ಅಲ್ಲದೆ ಸಂವಿಧಾನದ ವಿರುದ್ಧ ಆ ಕಾಲಘಟ್ಟದಲ್ಲಿಯೇ 250ಕ್ಕೂ ಹೆಚ್ಚಿನ ಪ್ರತಿಭಟನೆಗಳು ನಡೆದಿವೆ ಎಂದು ಅವರು ಹೇಳಿದರು.

ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಬಿಜೆಪಿ ಮತ್ತು ಸಂಘಪರಿವಾರಕ್ಕೆ ಸಂವಿಧಾನದ ಬಗ್ಗೆ ಅಸಮಾಧಾನ ಇದೆ. ಹಾಗಾಗಿ ಈಗಲೂ ಅವರು ಸಂವಿಧಾನವನ್ನು ಒಪ್ಪುತ್ತಿಲ್ಲ. ಏಕೆಂದರೆ ಸಂವಿಧಾನವು ಅವರು ನಂಬಿದ ಮನುಸ್ಮೃತಿ ವಿರುದ್ಧ ಇದೆ ಎಂದರು.    

ವೇದ ಕಾಲದಲ್ಲಿ ಪ್ರಜಾಪ್ರಭುತ್ವ ಇದೆ ಎಂದು ಸುಳ್ಳು ಹೇಳಲಾಗುತ್ತಿದೆ. ಸಂವಿಧಾನವನ್ನು ಒಪ್ಪಿಕೊಂಡ ಬಳಿಕವೇ ದೇಶದಲ್ಲಿ ಪ್ರಜಾಪ್ರಭುತ್ವ ಬಂದಿತು. ವೇದ ಕಾಲದಲ್ಲಿ ಪ್ರಜಾಪ್ರಭುತ್ವ ಇದ್ದಿದ್ದದರೆ, ಸಂವಿಧಾನದ ಅವಶ್ಯಕತೆ ಏಕೆ ಇತ್ತು ಎಂದು ಅವರು ಪ್ರಶ್ನಿಸಿದರು. 

ಮಾನವ ಬಂಧುತ್ವ ವೇದಿಕೆಯ ಮುಖಂಡ ರಾಮನಾಯಕ್ ಮಾತನಾಡಿ, ದೇಶದಲ್ಲಿ ಸಂವಿಧಾನ ಬದಿಗೊತ್ತಿ, ಗುಟ್ಟಾಗಿ ಮನುಸ್ಮೃತಿ ಅಳವಡಿಸುವ ಹುನ್ನಾರಗಳು ನಡೆಯುತ್ತಿವೆ. ಆದರೆ ನಮ್ಮವರು ಅಯ್ಯಪ್ಪ ಸ್ವಾಮಿ ಮಾಲೆಯನ್ನು ಹಾಕಿ, ಗಣೇಶ ಹಬ್ಬದಂದು ಕುಣಿದು ಕುಪ್ಪಳಿಸಿ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. ದಲಿತ ಮುಖಂಡ ಹೆಣ್ಣೂರು ಶ್ರೀನಿವಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Similar News