ಶರಾವತಿ ಮುಳುಗಡೆ ಸಂತ್ರಸ್ತರ ಡಿ ನೋಟಿಫಿಕೇಷನ್ ರದ್ದತಿ | ಡಿಸಿ ವರದಿ ಬಳಿಕ ಕೇಂದ್ರದ ಅನುಮತಿ ಪಡೆಯುತ್ತೇವೆ: ಬೊಮ್ಮಾಯಿ

Update: 2022-11-26 05:25 GMT

ಶಿವಮೊಗ್ಗ: ''ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಂಚಿಕೆ ವಿಚಾರವಾಗಿ ಈ ಹಿಂದೆ ಆಗಿರುವ ಡಿನೋಟಿಫಿಕೇಷನ್ ಕುರಿತು ಡಿಸೆಂಬರ್ 3ನೇ ವಾರದೊಳಗೆ ವರದಿ ಕೊಡಲು ಸೂಚಿಸಿದ್ದೇನೆ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು

ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ''ಶರಾವತಿ ಸಂತ್ರಸ್ತರ ಭೂ ಹಕ್ಕಿನ  ವಿಚಾರದ ಬಗ್ಗೆ ಜಿಲ್ಲಾಧಿಕಾರಿಯವರಿಂದ ಮಾಹಿತಿ ಪಡೆದಿದ್ದೇನೆ. ಈ ಹಿಂದೆ ಆಗಿರುವ ಡಿ ನೋಟಿಪಿಕೇಶನ್ ಕುರಿತು ಡಿಸೆಂಬರ್ 3ನೇ ವಾರದೊಳಗೆ ವರದಿ ಕೊಡಲು ಸೂಚಿಸಿದ್ದೇನೆ. ಡಿಸಿ ಅವರು ವರದಿ ಕೊಟ್ಟ ತಕ್ಷಣ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡುತ್ತೇವೆ'' ಎಂದರು.

''ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂ ಮಂಜೂರಾತಿ ಪಡೆಯಲು ಹಿಂದಿನ ಸರಕಾರ ಅನುಮತಿ ಪಡೆಯದ ಕಾರಣ ಕೇಂದ್ರ ಸರಕಾರದಿಂದ ಅನುಮತಿ ಪಡೆಯಬೇಕಿದೆ. ಈಗಾಗಲೇ ಕೇಂದ್ರ ಸಚಿವರಿಗೆ ವಿಷಯ ತಿಳಿಸಲಾಗಿದೆ.ಆದಷ್ಟು ಬೇಗ ಕೇಂದ್ರದ ಅನುಮತಿ ಪಡೆದು ಸಮಸ್ಯೆ ಪರಿಹರಿಸುತ್ತೇವೆ.ಸಂತ್ರಸ್ಥರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ'' ಎಂದರು.

ಮತದಾರರ ಪಟ್ಟಿ ದುರ್ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಎಲ್ಲಾ ವಿಚಾರಗಳನ್ನು ಸೂಕ್ಷ್ಮವಾಗಿ ತನಿಖೆ ನಡೆಸುವಂತೆ ಸೂಚಿಸಲಾಗಿದೆ.ಅಧಿಕಾರಿಗಳಿಗೆ ಮುಕ್ತವಾಗಿ ತನಿಖೆ ಮಾಡಲು ಬಿಟ್ಟಿದ್ದೇವೆ. ಇದರಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗುತ್ತದೆ'' ಎಂದರು.

ಮಹಾರಾಷ್ಟ್ರ ಗಡಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಗಡಿ ವಿಚಾರದಲ್ಲಿ ನಮ್ಮ‌ ನಿಲುವನ್ನು ಈಗಾಗಲೇ ತಿಳಿಸಿದ್ದೇವೆ. ಗಡಿ ವಿವಾದ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ.ನಮಗೆ ಕಾನೂನಿನಲ್ಲಿ ಗಟ್ಟಿಯಾದ ನೆಲೆಗಟ್ಟಿದೆ. ಈ ಬಗ್ಗೆ ಸರ್ವಪಕ್ಷ ಸಭೆ ಕರೆದು ಚರ್ಚಿಸುತ್ತೇನೆ.ಕಾನೂನು ತಜ್ಞರ ಜೊತೆ ಚರ್ಚಿಸುತ್ತೇವೆ. ಸಮರ್ಥವಾಗಿ ವಾದ ಮಂಡಿಸುತ್ತೇವೆ'' ಎಂದರು.

ಮಂಗಳೂರು ಸ್ಫೋಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ನಮ್ಮ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿದ್ದಾರೆ.ಘಟನೆಗೆ ಸಂಬಂಧಿಸಿದ ಸಾಕ್ಷ್ಯಾಧಾರ ಸಂಗ್ರಹಿಸಿದ್ದಾರೆ.ಇಂತಹ ಪ್ರಕರಣ ಇದ್ದಾಗ ಯುಎಪಿಎ ಅಡಿ ಕೇಸ್ ದಾಖಲಾಗಬೇಕು. ಇಂತಹ ಪ್ರಕರಣ ಎನ್ ಐಎ ಗೆ ವಹಿಸಬೇಕಾಗುತ್ತದೆ'' ಎಂದರು.

ಬಗರ್ ಹುಕುಂ ಸಮಸ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಲೆನಾಡು ಭಾಗದಲ್ಲಿ ಡೀಮ್ಡ್ ಫಾರೆಸ್ಟ್  ಹೆಚ್ಚಿದೆ. ಡೀಮ್ಡ್ ಫಾರೆಸ್ಟ್ ವಿಚಾರ ಕುರಿತಂತೆ ಸರಕಾರ  ನಿರ್ಣಯ ಕೈಗೊಂಡಿದೆ.ಸುಮಾರು 6 ಲಕ್ಷ ಎಕರೆ ಡೀಮ್ಡ್ ಫಾರೆಸ್ಟ್ ಲ್ಯಾಂಡನ್ನು ಕಂದಾಯ ಇಲಾಖೆಗೆ ವಹಿಸಲಾಗಿದೆ'' ಎಂದರು.

Similar News