ಆರೆಸ್ಸೆಸ್‍ಗೆ ಮನಸೋ ಇಚ್ಛೆ ಸರಕಾರಿ ಜಮೀನುಗಳ ಮಂಜೂರು: ಸಿದ್ದರಾಮಯ್ಯ ಆಕ್ರೋಶ

Update: 2022-11-25 14:32 GMT

ಬೆಂಗಳೂರು,ನ.25: ಜಾನುವಾರು ಹತ್ಯೆ ನಿಷೇಧ ಕಾಯ್ದೆ ನೆಪದಲ್ಲಿ ರೈತರಿಗೆ ಕಿರುಕುಳ ನೀಡಲಾಗುತ್ತಿದ್ದು, ಇದನ್ನು ತಪ್ಪಿಸಬೇಕು. ಆರೆಸ್ಸೆಸ್‍ಗೆ ಸರಕಾರಿ ಜಮೀನುಗಳನ್ನು ಮನಸೋ ಇಚ್ಛೆ ನೀಡುತ್ತಿದ್ದೀರಿ. ಆದರೆ, ನಮ್ಮ ರೈತರ ಜಾನುವಾರುಗಳು ಮೇಯಲು ಜಾಗ ಇಲ್ಲದಂತಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿರುವ ಎಲ್ಲ ಮೇವಿನ ಕ್ಷೇತ್ರಗಳನ್ನು ಉಳಿಸಬೇಕು. ಸರಕಾರ ಕೂಡಲೆ ಮಧ್ಯಪ್ರವೇಶಿಸಿ ರೈತರು ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾಗಿ ಸಮಸ್ಯೆಗಳನ್ನು ಪರಿಹರಿಸಬೇಕು. ಪಶುಭಾಗ್ಯ ಯೋಜನೆಯನ್ನು ಸಶಕ್ತಗೊಳಿಸಬೇಕು. ಸರಕಾರಿ ನೌಕರರಿಂದ ಲಕ್ಷಾಂತರ ರೂ.ದೋಚಲು ಹೊರಟಿರುವ ಪುಣ್ಯಕೋಟಿ ಯೋಜನೆಯನ್ನು ಕೂಡಲೆ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಾಕಿಯಿರುವ ಹಾಲಿನ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿ ಹಾಲಿನ ಉತ್ಪನ್ನಗಳ ದರ ಏರಿಕೆಯಿಂದಾಗಿ ಬರುವ ಲಾಭವನ್ನು ಪೂರ್ಣವಾಗಿ ಹೈನುಗಾರರಿಗೆ ನೀಡಬೇಕು. ಹಾಲು ಉತ್ಪಾದಕರು, ಹಾಲು ಉತ್ಪಾದಕ ಮಂಡಳಿಗಳೂ ಒತ್ತಡದಲ್ಲಿರುವ ಪರಿಣಾಮ 94 ಲಕ್ಷ ಲೀಟರುಗಳಿಗೆ ತಲುಪಿದ್ದ ಹಾಲಿನ ಸಂಗ್ರಹವು ಈ ತಿಂಗಳಲ್ಲಿ 77 ಲಕ್ಷ ಲೀಟರುಗಳಿಗೆ ಕುಸಿದಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಸರಾಸರಿ 9 ಲಕ್ಷ ಹಾಲು ಉತ್ಪಾದಕರಿಗೆ ಸರಕಾರ ಪ್ರೋತ್ಸಾಹ ಧನ ನೀಡುತ್ತಿದೆ. ಹಾಲು ಯಥೇಚ್ಛವಾಗಿ ಉತ್ಪಾದಿಸುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಮುಂತಾದ ಜಿಲ್ಲೆಗಳ ರೈತರೆ ಹಸುಗಳನ್ನು ಸಾಕಲು ನಿರಾಸಕ್ತಿ ತೋರಿಸುತ್ತಿದ್ದಾರೆ. ಸರಕಾರ ತನ್ನ ಪಶುಪಾಲಕ ವಿರೋಧಿ ನೀತಿಗಳಿಂದಾಗಿ ಹಾಲು ಉತ್ಪಾದಕರ ಬದುಕನ್ನು ನಿರ್ನಾಮ ಮಾಡಲು ಹೊರಟಿದೆ ಎಂದು ಅವರು ಟೀಕಿಸಿದ್ದಾರೆ.

ಅನೇಕ ಜಿಲ್ಲೆಗಳ ಹಾಲು ಉತ್ಪಾದಕರಿಗೆ 7-8 ತಿಂಗಳಿಂದ ಪ್ರೋತ್ಸಾಹ  ಧನವನ್ನು ನೀಡಿಲ್ಲ. ಇದರ ಬಾಬತ್ತು ನೂರಾರು ಕೋಟಿಗಳಷ್ಟು ಬಾಕಿ ಇದೆ. ಜಾನುವಾರುಗಳಿಗೆ ನೀಡುವ ಹಿಂಡಿ, ಬೂಸ ಮುಂತಾದ ಪಶು ಆಹಾರದ ಬೆಲೆಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿವೆ. ಇದರಿಂದಾಗಿ ರೈತರು ಜಾನುವಾರುಗಳನ್ನು ಸಾಕಣೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

‘ಕ್ಷೀರ ಭಾಗ್ಯ’ ಯೋಜನೆಯಡಿ ಹಾಲಿನ ಪುಡಿಯನ್ನು ಶಾಲೆ ಮತ್ತು ಅಂಗನವಾಡಿಗಳ ಮಕ್ಕಳಿಗಾಗಿ ನೀಡಲಾಗುತ್ತಿದೆ. ಕೆಲವು ವರ್ಷಗಳಿಂದ ಹಾಲಿನ ಪುಡಿಯ ದರ ಪರಿಷ್ಕರಿಸಿಲ್ಲ. ಮಾರುಕಟ್ಟೆಯಲ್ಲಿ ಕೆಎಂಎಫ್ ಒಂದು ಕೆಜಿ ಹಾಲಿನ ಪುಡಿಯನ್ನು 350 ರೂ.ಗೆ ಮಾರಾಟ ಮಾಡುತ್ತಿರುವುದರಿಂದ ಪ್ರತಿ ವರ್ಷ 250 ಕೋಟಿ ರೂ. ನಷ್ಟವಾಗಿ ಒತ್ತಡಕ್ಕೆ ಸಿಲುಕಿದೆ ಎಂದು ಅವರು ಹೇಳಿದ್ದಾರೆ.

ಸರಕಾರ ಕೆಎಂಎಫ್‍ಗೆ ಮಾಡುತ್ತಿರುವ ಅನ್ಯಾಯದಿಂದಾಗಿ ರಾಜ್ಯದ ಜನರು ಮತ್ತು ಬೆಲೆ ಏರಿಕೆಯ ಹೊರೆಯನ್ನು ಅನುಭವಿಸುತ್ತಿದ್ದಾರೆ. ಹಾಲು, ಮೊಸರಿಗೆ ಲೀಟರಿಗೆ 2 ರೂ.ಹೆಚ್ಚು ಮಾಡಿದ್ದಾರೆ. ಆದರೆ, ಕಳೆದ ಎರಡು ತಿಂಗಳಲ್ಲಿ ಪ್ರತಿ ಕೆಜಿ ತುಪ್ಪದ ಬೆಲೆಯನ್ನು ಸದ್ದಿಲ್ಲದೆ 140 ರೂ.ಹೆಚ್ಚಿಸಿದ್ದಾರೆ. ಎಲ್ಲ ಸಿಹಿ ಪದಾರ್ಥಗಳು, ಪನ್ನೀರ್ ಮುಂತಾದವುಗಳ ಬೆಲೆಯನ್ನೂ ಶೇ.15 ರಷ್ಟು ಹೆಚ್ಚಿಸಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಆದರೆ ಏರಿಕೆಯಾಗಿರುವ ಹಾಲಿನ ದರವನ್ನು ಹೊರತುಪಡಿಸಿ ಉಳಿದ ಉತ್ಪನ್ನಗಳ ಹೆಚ್ಚುವರಿ ಹಣವನ್ನು ರೈತರಿಗೆ ವರ್ಗಾಯಿಸದೆ ಮೋಸ ಮಾಡಲಾಗುತ್ತಿದೆ. ಜಾನುವಾರುಗಳಿಗೆ ಚರ್ಮಗಂಟು ರೋಗವು ವ್ಯಾಪಕವಾಗಿ ಹರಡುತ್ತಿದೆ. ಅವುಗಳಿಗೆ ಲಸಿಕೆ ಹಾಕಲು ವೈದ್ಯರೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Similar News