ತುಮಕೂರು | ವಸತಿ ಶಾಲಾ ಮಕ್ಕಳಿಗೆ ಥಳಿತ: ದೂರು ದಾಖಲು

Update: 2022-11-25 17:03 GMT

ತುಮಕೂರು.ನ.25: ಅನುದಾನಿತ ವಸತಿ ಶಾಲೆಯೊಂದರ ಮಕ್ಕಳ ಮೇಲೆ ಆಡಳಿತ ಮಂಡಳಿಯ ಕಾರ್ಯದರ್ಶಿ ಪುತ್ರ ಬೆಲ್ಟ್ ಹಾಗೂ ದೊಣ್ಣೆಯಿಂದ ಮನ ಬಂದಂತೆ ಥಳಿಸಿರುವ ಘಟನೆ ತುಮಕೂರು ತಾಲೂಕಿನ ಮಲ್ಲಸಂದ್ರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮಲ್ಲಸಂದ್ರದ  ಅನುದಾನಿತ ವಸತಿ ಶಾಲೆಯೊಂದರ ಮಕ್ಕಳು ಸೋಮವಾರ ರಾತ್ರಿ 10 ಗಂಟೆಗೆ ನಿದ್ರೆಗೆ ಜಾರಿದ್ದಾರೆ. ಈ ಸಂದರ್ಭದಲ್ಲಿ ವಸತಿ ಶಾಲೆಗೆ ಭೇಟಿ ನೀಡಿದ ಶಾಲೆಯ ಕಾರ್ಯದರ್ಶಿ ಎನ್ ಮೂರ್ತಿ ಅವರ ಪುತ್ರ ಭರತ್ ನಿದ್ರೆಯಲ್ಲಿದ್ದ ಮಕ್ಕಳನ್ನು ಎಬ್ಬಿಸಿ ಮನಬಂದಂತೆ ಥಳಿಸಿದ್ದಾನೆಂದು ಆರೋಪಿಸಲಾಗಿದೆ.

ಶಾಲಾ ಕಾರ್ಯದರ್ಶಿ ಪುತ್ರ ಭರತ್ ವಸತಿ ಶಾಲೆಗೆ ಭೇಟಿ ನೀಡಿ,  ಹಾಸ್ಟೆಲ್ ನಲ್ಲಿ ಮಲಗಿದ್ದ 40 ವಿದ್ಯಾರ್ಥಿಗಳನ್ನು ಎಬ್ಬಿಸಿದ್ದಾರೆ. ಆಗ ಎಲ್ಲಾ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ಯಾಕೆ ಇಷ್ಟು ಬೇಗ ಮಲಗಿದ್ದೀರಿ, ಓದಿಕೊಳ್ಳೋದಿಲ್ವಾ ಎಂದು ಬೆಲ್ಟ್ ಮತ್ತು ದೊಣ್ಣೆಯಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರೆಂದು ದೂರಲಾಗಿದೆ.

ವಸತಿ ಶಾಲೆಯ ಕಾರ್ಯದರ್ಶಿ ಪುತ್ರ ಬೆಲ್ಟ್ ನಿಂದ ಹೊಡೆಯುತ್ತಿದ್ದರೆ ವಿದ್ಯಾರ್ಥಿಗಳು ಕಿರುಚಿಕೊಂಡರೂ ನಿಲ್ಲಿಸದೇ ಥಳಿಸಿದರೆಂದು ಹೇಳಲಾಗಿದೆ. ಘಟನೆಯಿಂದ ಭಯಗೊಂಡಿದ್ದ ವಿದ್ಯಾರ್ಥಿಗಳು ಮೂರು ದಿನದ ಬಳಿಕ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೋಷಕರು ವಸತಿ ಶಾಲೆಯ ಬಳಿ ಬಂದು ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Similar News