ಲೋಕಾಯುಕ್ತ ಬಲೆಗೆ ಬಿದ್ದ ಕಿತ್ತೂರು ತಹಶೀಲ್ದಾರ್: 10 ಲಕ್ಷ ರೂ. ನಗದು, ಹಲವು ದಾಖಲೆಗಳು ವಶ

Update: 2022-11-26 04:09 GMT

ಬೆಳಗಾವಿ, ನ.16: ಲಂಚ ಸ್ವೀಕರಿಸುತ್ತಿದ್ದ ವೇಳೆ ಚನ್ನಮ್ಮನ ಕಿತ್ತೂರು ತಹಶೀಲ್ದಾರ್ ಶುಕ್ರವಾರ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿರುವುದು ವರದಿಯಾಗಿದೆ. ಈ ಸಂಬಂಧ ತಹಶೀಲ್ದಾರ್‌ ಸೋಮಲಿಂಗಪ್ಪ ಹಾಲಗಿ ಹಾಗೂ ಗುಮಾಸ್ತ ಜಿ.ಪ್ರಸನ್ನ ಎಂಬವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ನಡುವೆ ತಹಶೀಲ್ದಾರ್ ಮನೆ ಹಾಗೂ ಕಚೇರಿಯನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ತಡರಾತ್ರಿಯವರೆಗೆ ಜಾಲಾಡಿದ್ದು, ಹಲವು ದಾಖಲೆಗಳು ಹಾಗೂ 10 ಲಕ್ಷ ರೂ.ಗೂ ಅಧಿಕ ನಗದು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

 ಸೋಮಲಿಂಗಪ್ಪ ಹಾಲಗಿ ಹಾಗೂ ಜಿ.ಪ್ರಸನ್ನರನ್ನು ಶನಿವಾರ ಬೆಳಗ್ಗೆ ಲೋಕಾಯುಕ್ತ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದು ಹಾಜರುಪಡಿಸಿದರು. ಅಲ್ಲಿಂದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು.

ಚನ್ನಮ್ಮನ ಕಿತ್ತೂರು ತಾಲೂಕಿನ ಖೋದನಾಪುರ ಗ್ರಾಮದ ರಾಜೇಂದ್ರ ಬಾಪು ಸಾಹೇಬ ಇನಾಮದ್ದಾರ್ ಎಂಬವರು ತಮ್ಮ ತಂದೆ ಬಾಪು ಸಾಹೇಬ್ ಇನಾಮ್ದಾರ್ ಹೆಸರಿನಲ್ಲಿದ್ದ 10 ಎಕರೆ ಜಮೀನಿನನ್ನು ತಮ್ಮ ಹೆಸರಿಗೆ ಖಾತಾ ಬದಲಾವಣೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಆರೋಪಿಗಳು ಇದಕ್ಕೆ 5 ಲಕ್ಷರೂ. ಲಂಚ ಕೇಳಿದ್ದರೆನ್ನಲಾಗಿದೆ. ಮುಂಗಡವಾಗಿ 2 ಲಕ್ಷ ರೂ. ನೀಡುವಂತೆ ಬೇಡಿಕೆ ಮುಂದಿಟ್ಟಿದ್ದರು ಎಂದು ರಾಜೇಂದ್ರ ಬಾಪು ಸಾಹೇಬ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಲೋಕಾಯುಕ್ತ ಪೊಲೀಸರು, ತಹಶೀಲ್ದಾರ್ ಶುಕ್ರವಾರ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ಮಾಡಿದ್ದಾರೆ.

Similar News