ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಕಿತ್ತೂರು ತಹಶೀಲ್ದಾರ್‌; 10 ಲಕ್ಷ ರೂ. ನಗದು ಜಪ್ತಿ

Update: 2022-11-26 04:27 GMT

ಬೆಳಗಾವಿ: ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲೆಯ ಕಿತ್ತೂರು ತಹಶೀಲ್ದಾರ್ ಸೋಮಲಿಂಗ ಅವರು ಲೋಕಾಯುಕ್ತ ಸಂಸ್ಥೆಯ (Karnataka Lokayukta) ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ವರದಿಯಾಗಿದೆ. 

ಲೋಕಾಯುಕ್ತ ಎಸ್‌ಪಿ ಯಶೋಧಾ ವಂಟಗೋಡೆ ಅವರ ನೇತೃತ್ವದ ಅಧಿಕಾರಿಗಳು ಕಿತ್ತೂರು ಪಟ್ಟಣದಲ್ಲಿರುವ ತಹಶೀಲ್ದಾರ್‌ ಅವರ ಮನೆಯಲ್ಲಿ ರಾತ್ರಿಯಿಡೀ ಪರಿಶೀಲನೆ ನಡೆಸಿ, 10 ಲಕ್ಷಕ್ಕೂ ಹೆಚ್ಚು ನಗದು ಸೇರಿದಂತೆ ದಾಖಲೆ ಪತ್ರಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

ಆರೋಪ ಏನು?: ಚನ್ನಮ್ಮನ ಕಿತ್ತೂರು ತಾಲೂಕಿನ ಖೋದನಾಪುರ ಗ್ರಾಮದ ರಾಜೇಂದ್ರ ಬಾಪುಸಾಜೇಬ ಇನಾಮದಾರ ಎಂಬುವರು ತಮ್ಮ ತಂದೆ ಬಾಪುಸಾಹೇಬ್ ಇನಾಮದಾರ ಅವರ ಹೆಸರಿನಲ್ಲಿದ್ದ 10 ಎಕರೆ ಜಮೀನಿನನ್ನು ತಮ್ಮ ಹೆಸರಿಗೆ ಖಾತಾ ಬದಲಾವಣೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ತಹಶೀಲ್ದಾರ್ ಸೋಮಲಿಂಗ ಹಾಲಗಿ, ರಾಜೇಂದ್ರ ಇನಾಮದಾರ್ ಬಳಿ 5 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದ ಎಂದು ಆರೋಪಿಸಲಾಗಿದೆ. 

ಅದರಂತೆ ನಿನ್ನೆ(ಶುಕ್ರವಾರ) ರಾತ್ರಿ ತಹಶೀಲ್ದಾರ್, ಮನೆಯಲ್ಲೇ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಗುಮಾಸ್ತ ಜಿ. ಪ್ರಸನ್ನ ಮತ್ತು ತಹಶೀಲ್ದಾರ್ ಸೋಮಲಿಂಗ ಹಾಲಗಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Similar News