ಇಂದು ಸಂವಿಧಾನ ದಿನ ಆಚರಣೆ : ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಸೇರಿ ಗಣ್ಯರಿಂದ ಶುಭಾಶಯ

Update: 2022-11-26 07:11 GMT

ಬೆಂಗಳೂರು: ಇಂದು ಸಂವಿಧಾನ ದಿನ ಆಚರಣೆ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ​ಸೇರಿದಂತೆ ಹಲವು ಗಣ್ಯರು ನಾಡಿನ ಸಮಸ್ತ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "1949ರ ನವೆಂಬರ್ 26ರಂದು ಭಾರತದ ಸಂವಿಧಾನವನ್ನು ಅಂದಿನ ಸಂವಿಧಾನ ಸಭೆ ಅಂಗೀಕರಿಸಿತು. ನಮ್ಮ ಸಂವಿಧಾನದ ಸದಾಶಯಗಳನ್ನು ಸಂರಕ್ಷಿಸುವ ಹಾಗೂ ಪಾಲಿಸುವ ದೃಢ ನಿಶ್ಚಯದೊಂದಿಗೆ ,ಸಂವಿಧಾನದ ಕರ್ತೃಗಳನ್ನು ಸ್ಮರಿಸಿ,ಸಂವಿಧಾನಕ್ಕೆ ಸದಾ ಬದ್ಧವಾಗಿರುವ ಸಂಕಲ್ಪವನ್ನು ಮಾಡೋಣ."  ಎಂದು ಕರೆ ನೀಡಿದ್ದಾರೆ. 

''ಸಂವಿಧಾನದ ಉಳಿವಿನಲ್ಲಿಯೇ ನಮ್ಮ ಉಳಿವು, ಅಳಿವಿನಲ್ಲಿಯೇ ನಮ್ಮದೂ ಅಳಿವು. ಸಂವಿಧಾನ ವಿರೋಧಿ ಶಕ್ತಿಗಳನ್ನು ಹಿಮ್ಮೆಟ್ಟಿಸಿ ಸಂವಿಧಾನವನ್ನು ರಕ್ಷಿಸುವ ಹೋರಾಟಕ್ಕೆ ನಮ್ಮನ್ನು ಸಮರ್ಪಿಸಿಕೊಳ್ಳೋಣ. ಸಮಸ್ತ ದೇಶಪ್ರೇಮಿಗಳಿಗೆ ಸಂವಿಧಾನ ದಿನಾಚರಣೆಯ ಶುಭಹಾರೈಕೆಗಳು'' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. 

''ಇಂದು ಭಾರತ ಸಂವಿಧಾನ ದಿನ. ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನತೆ ನೀಡಿದ ಪುಣ್ಯದಿನ. ನಮ್ಮ ಸಂವಿಧಾನದ ಆಶಯಗಳನ್ನು ಸದಾ ಸಂರಕ್ಷಿಸುವ ಹಾಗೂ ಪಾಲಿಸುವ ಕಂಕಣ ತೊಟ್ಟು ನಮ್ಮ ಎಲ್ಲ ಸಂವಿಧಾನ ಕರ್ತೃಗಳನ್ನು ಸ್ಮರಿಸೋಣ, ಸಂವಿಧಾನಕ್ಕೆ ಸದಾ ಬದ್ಧರಾಗಿರುವ ಸಂಕಲ್ಪವನ್ನು ಮಾಡೋಣ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವಿಟರ್ ನಲ್ಲಿ ಬರದುಕೊಂಡಿದ್ದಾರೆ. 

''ಹಿಂದೂಗಳ ರಕ್ಷಣೆಗೆ ಭಗವದ್ಗೀತೆ ಇದೆ ಮುಸ್ಲಿಮರ ರಕ್ಷಣೆಗೆ ಕುರಾನ್ ಇದೆ ಕ್ರೈಸ್ತರ ರಕ್ಷಣೆಗೆ ಬೈಬಲ್ ಇದೆ. ಆದರೆ ಇವರೆಲ್ಲರ ರಕ್ಷಣೆಗೆ ಇರುವುದು ಈ ದೇಶದ ಸಂವಿಧಾನ ಮಾತ್ರ. ಒಂದು ವೇಳೆ ಬಾಬಾ ಸಾಹೇಬರ ಸಂವಿಧಾನ ಇಲ್ಲದೇ ಹೋಗಿದ್ದರೆ ನಾವು ಈ ದಿನ ನಾವೆಲ್ಲರೂ ನಾಯಿ ನರಿಗಳಂತೆ ಬದುಕಬೇಕಾಗಿತ್ತು ಎಂಬುದನ್ನು ನಾವು ನೆನಪಿಡಬೇಕು'' ಎಂದು ಮಾಜಿ ಸಚಿವ ಎಚ್.ಸಿ ಮಹದೇವಪ್ಪ ಟ್ವೀಟ್ ಮಾಡಿದ್ದಾರೆ. 

Similar News