ಮುಂದಿನ ವರ್ಷ ಪ್ರತ್ಯೇಕ ಕೊಡವ ಲ್ಯಾಂಡ್ ಘೋಷಣೆ: BJP ನಾಯಕ ಸುಬ್ರಮಣಿಯನ್ ಸ್ವಾಮಿ ವಿಶ್ವಾಸ

Update: 2022-11-26 12:10 GMT

ಮಡಿಕೇರಿ ನ.26: ಕೊಡವ ಸ್ವಾಯತ್ತ ನಾಡಿನ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸುಪ್ರಿಂಕೋರ್ಟ್‍ನಲ್ಲಿ ವಾದ ಮಂಡಿಸಿ ಜೂನ್ ಅಥವಾ ಜುಲೈ ಅಂತ್ಯದೊಳಗೆ ಕೊಡವ ಲ್ಯಾಂಡ್ ಬೇಡಿಕೆಗೆ ನ್ಯಾಯಾಲಯದಿಂದ ಸ್ಪಂದನೆ ದೊರಕುವಂತೆ ಮಾಡುವುದಾಗಿ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಭರವಸೆ ನೀಡಿದ್ದಾರೆ.

ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆದ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೊಡವರಿಗೆ ಸ್ವಾಯತ್ತ ನಾಡು ಕೇಳಲು ಸಂವಿಧಾನಾತ್ಮಕವಾಗಿ ಎಲ್ಲಾ ಹಕ್ಕಿದೆ. ಕೊಡವ ಸ್ವಾಯತ್ತ ನಾಡಿನ ಬೇಡಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸುವೆ, ಇದಕ್ಕಾಗಿ ವಕೀಲರನ್ನು ಕೂಡ ನಿಯೋಜಿಸಿರುವೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಹಿಂದೆ ತಾನು ಕೊಡವ ಸ್ವಾಯತ್ತ ನಾಡಿನ ಬೇಡಿಕೆಯನ್ನು ಈಡೇರಿಸುವುದಾಗಿ ಹೇಳಿದ್ದರು. ಆದರೆ 2 ವರ್ಷ ಕಳೆದರೂ ಅವರು ಏನನ್ನೂ ಮಾಡಲಿಲ್ಲ. ಈಗಿನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರಿಗೆ ಸಿಎನ್‍ಸಿ ಬೇಡಿಕೆ ಬಗ್ಗೆ ತಿಳುವಳಿಕೆ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿ ಸುಪ್ರೀಂಕೋರ್ಟ್‍ನಲ್ಲಿ ತಾನೇ ಕೊಡವರ ಬೇಡಿಕೆ ಪರ ವಾದ ಮಂಡಿಸುವೆ ಎಂದೂ ಸುಬ್ರಹ್ಮಣ್ಯ ಸ್ವಾಮಿ ತಿಳಿಸಿದರು.  

ಮುಂದಿನ ಕೊಡವ ನ್ಯಾಷನಲ್ ಡೇ ವೇಳೆಗೆ ಪ್ರತ್ಯೇಕ ಕೊಡವ ಹೋಂ ಲ್ಯಾಂಡ್ ನೊಂದಿಗೆ ಸಂಭ್ರಮಿಸೋಣ. ಕೊಡವ ಲ್ಯಾಂಡ್ ಬೇಡಿಕೆ ನ್ಯಾಯುತವಾಗಿದೆ. ಸಿಎನ್‍ಸಿಯ ಬೇಡಿಕೆಗಳು, ಸುಪ್ರೀಂ ಕೋರ್ಟ್‍ನ ಮೂಲಕ ಈಡೇರುವ ವಿಶ್ವಾಸವಿದೆ. ಪ್ರತ್ಯೇಕ ರಾಜ್ಯ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಈ ಬೇಡಿಕೆ ಈಗ ಅಪ್ರಸ್ತುತ ಎಂದು ಅಭಿಪ್ರಾಯಪಟ್ಟರು.

ಗೋವಾ, ತೆಲಂಗಾಣ, ಉತ್ತರಖಂಡ್ ಪ್ರದೇಶಗಳು ನಿರಂತರ ಹೋರಾಟದ ಫಲವಾಗಿ ಪ್ರತ್ಯೇಕ ರಾಜ್ಯಗಳಾಗಿ ಮಾರ್ಪಟ್ಟಿವೆ. ಕೊಡವರು ಎಂದೆಂದಿಗೂ ಈ ದೇಶದ ಅಂಗವಾಗಿಯೇ ಉಳಿಯಲಿದ್ದಾರೆ. ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಪ್ರತ್ಯೇಕ ಹೋಂ ಲ್ಯಾಂಡ್ ಕೇಳುತ್ತಿದ್ದಾರೆ. ಇದಕ್ಕೆ ನನ್ನ ಸಂಪೂರ್ಣ ಸಹಕಾರ ಮತ್ತು ಬೆಂಬಲವಿದೆ. ಮುಂದಿನ ವರ್ಷ ಪ್ರತ್ಯೇಕ ಕೊಡವ ಹೋಂ ಲ್ಯಾಂಡ್ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸೋಣ. ಇಡೀ ಭಾರತೀಯರು ಕೊಡವರ ಪರವಾಗಿ ಇದ್ದಾರೆ ಎಂದು ಸುಬ್ರಮಣ್ಯನ್ ಸ್ವಾಮಿ ತಿಳಿಸಿದರು.   

ಇದೇ ಸಂದರ್ಭ ಡಾ.ಸುಬ್ರಮಣ್ಯನ್ ಸ್ವಾಮಿ ಅವರು, ಕರಡ ಮಲೆತಿರಿಕೆ ದೇವಾಲಯದ ರಸ್ತೆ ಅಭಿವೃದ್ಧಿಗೆ ರಾಜ್ಯಸಭಾ ಸದಸ್ಯರ ನಿಧಿಯಿಂದ 10 ಲಕ್ಷ ರೂ. ಗಳನ್ನು ಘೋಷಿಸಿದರು. 

Similar News