ಪ್ರಧಾನಿ ಮೋದಿ ಕೈಗೊಂಡ ಕೆಲವು ನಿರ್ಧಾರಗಳ ಬಗ್ಗೆ ಆಕ್ಷೇಪವಿದೆ: ಸುಬ್ರಮಣಿಯನ್ ಸ್ವಾಮಿ

Update: 2022-11-26 13:13 GMT

ಮಡಿಕೇರಿ ನ.26 : 'ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ಬಗ್ಗೆ  ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ. ಆದರೆ ಪ್ರಧಾನಿಯಾಗಿ ಕೈಗೊಂಡ ಕೆಲವೊಂದು ನಿರ್ಧಾರಗಳ ಬಗ್ಗೆ ಆಕ್ಷೇಪವಿದೆ. ಕೆಲವು ವಿಚಾರಗಳಲ್ಲಿ ದಿಟ್ಟ ಹೆಜ್ಜೆ ಇಡುತ್ತಿಲ್ಲ' ಎಂದು ಅರ್ಥಶಾಸ್ತ್ರಜ್ಞ ಹಾಗೂ  ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ (Subramanian Swamy) ಟೀಕಿಸಿದ್ದಾರೆ.

ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಲವು ವಿಚಾರಗಳ ಬಗ್ಗೆ ಬಿಗಿ ನಿರ್ಧಾರಗಳನ್ನು ಮೋದಿ ಕೈಗೊಂಡಿಲ್ಲ ಎಂಬ ಅಸಮಾಧಾನವಿದೆ. ಹೀಗಿದ್ದರೂ ದೇಶದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಬೆಂಬಲದಿಂದ ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಸುಬ್ರಹ್ಮಣ್ಯ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಅಧಿಕಾರಸ್ಥರು ತಪ್ಪು ನಿರ್ಧಾರ ಕೈಗೊಂಡಾಗ ತಿಳಿದಿದ್ದೂ ಯಾಕೆ ನೀವು ಮೌನವಾಗಿದ್ದೀರಿ ಎಂದು ಜನರು ಪ್ರಶ್ನಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪ್ರಧಾನಿ ಬಗ್ಗೆ ಶ್ಲಾಘಿಸುವುದು, ಟೀಕಿಸುವುದು ಒಳ್ಳೆಯ ಲಕ್ಷಣ. ತಪ್ಪು ತೀರ್ಮಾನಗಳ ಕುರಿತಂತೆ ಹಲವೊಮ್ಮೆ ಪ್ರಧಾನಿಗೆ ತಾನು ಪತ್ರ ಬರೆದಿದ್ದೇನೆ. ಆದರೆ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೈಗೊಂಡಿರುವ ಭಾರತ್ ಜೋಡೊ ಯಾತ್ರೆ ಬಗ್ಗೆ ವ್ಯಂಗ್ಯವಾಡಿದ ಡಾ.ಸುಬ್ರಹ್ಮಣ್ಯ ಸ್ವಾಮಿ, ಯಾರು ಭಾರತವನ್ನು ಒಡೆದರೋ ಅವರೇ ತಾವು ಮಾಡಿದ ಕೃತ್ಯಕ್ಕೆ ಪ್ರಾಯಶ್ಚಿತವಾಗಿ “ಭಾರತ್ ಜೋಡೊ” ಎಂದು ತಾವೇ ಒಡೆದ ಭಾರತವನ್ನು ಜೋಡಿಸಲು ಹೊರಟಂತಿದೆ. ರಾಹುಲ್ ಗಾಂಧಿಗೆ ಮಾತ್ರ ಭಾರತ ಒಡೆದಂತೆ ಕಾಣುತ್ತಿದೆಯೇ ವಿನಾ ನಿಜವಾದ ಭಾರತ ಒಗ್ಗಟ್ಟಿನ ಭಾರತವಾಗಿದೆ, ಎಲ್ಲೂ  ಒಡೆದ ಭಾರತದಂತಿಲ್ಲ ಎಂದು ಹೇಳಿದರು. ಸದ್ಯದಲ್ಲಿಯೇ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಯಂಗ್ ಇಂಡಿಯಾ ಪ್ರಕರಣದಲ್ಲಿ ಜೈಲು ಸೇರಲಿದ್ದಾರೆ ಅವರು ಭವಿಷ್ಯ ನುಡಿದರು. 

Similar News