ಅಡ್ಡಂಡ ಕಾರ್ಯಪ್ಪಗೆ MLC, ಭೈರಪ್ಪಗೆ ಜ್ಞಾನಪೀಠ ಅರ್ಜೆಂಟಾಗಿ ಬೇಕಾಗಿದೆ: ಎಚ್.ವಿಶ್ವನಾಥ್ ಕಿಡಿ

Update: 2022-11-26 13:46 GMT

ಮೈಸೂರು,ನ.26:  ''ರಂಗಾಯಣ ನಿರ್ದೇಶಕ  ಅಡ್ಡಂಡ ಸಿ. ಕಾರ್ಯಪ್ಪ ಅವರಿಗೆ ಅರ್ಜೇಂಟಾಗಿ ಎಂಎಲ್‍ಸಿ ಆಗಬೇಕು, ಅದೇ ರೀತಿ ಹಿರಿಯ ಲೇಖಕ ಎಸ್.ಎಲ್.ಭೈರಪ್ಪ ಅವರಿಗೂ ಜ್ಞಾನಪೀಠ ಪ್ರಶಸ್ತಿಯ ಆಸೆ ಹೆಚ್ಚಾಗಿದೆ, ಇದಕ್ಕಾಗಿಯೇ ಇವರು ರಂಗಾಯಣದಲ್ಲಿ ಆರೆಸ್ಸೆಸ್ ಸಿದ್ಧಾಂತಗಳನ್ನು ಪ್ರಚಾರ ಮಾಡಲು ಹೊರಟಿದ್ದಾರೆ'' ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್  ಕಿಡಿ ಕಾರಿದ್ದಾರೆ.  

ಮೈಸೂರಿನ ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಅಡ್ಡಂಡ ತನ್ನ ಹೆಸರಿನ ಮುಂದೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಂತಹ ಹೆಸರಿಟ್ಟುಕೊಂಡು ಇಡೀ ಕೊಡಗಿಗೆ ಅಪಮಾನ ಮಾಡುತ್ತಿದ್ದಾರೆ. ಇನ್ನು ಮುಂದೆ ಕಾರ್ಯಪ್ಪ ಅನ್ನುವ ಹೆಸರನ್ನ ತೆಗೆದು ಬಿಡುವುದು ಸೂಕ್ತ. ಇಂತಹ ಅನ್ನಾಡಿ ಅಡ್ಡಂಡ ಕಾರ್ಯಪ್ಪನೊಂದಿಗೆ ಸಾಹಿತ್ಯ ಲೋಕದ ಎತ್ತರದ ವ್ಯಕ್ತಿ ಭೈರಪ್ಪ ಸೇರಿರುವುದು ಸೂಕ್ತವಲ್ಲ'' ಎಂದು ಬೇಸರ ವ್ಯಕ್ತಪಡಿಸಿದರು.

''ಸಾಹಿತಿ ಭೈರಪ್ಪ ಅವರಿಗೆ ಅರ್ಜೆಂಟ್ ಆಗಿ ಜ್ಞಾನಪೀಠ ಬೇಕಿದೆ, ಕೊಟ್ಟುಬಿಡಿ ಎಂದ ಅವರು, ಮುಖ್ಯಮಂತ್ರಿಗಳು ಕೂಡಲೇ ಸಾಂಸ್ಕೃತಿಕ  ಲೋಕವನ್ನು ಹಾಳು ಮಾಡುತ್ತಿರುವ ಅಡ್ಡಂಡ ಸಿ. ಕಾರ್ಯಪ್ಪನನ್ನು ರಂಗಾಯಣ ನಿರ್ದೇಶಕ ಸ್ಥಾನದಿಂದ ವಜಾ ಮಾಡಬೇಕು'' ಎಂದು ಆಗ್ರಹಿಸಿದರು.

''ಅಡ್ಡಂಡ ಟಿಪ್ಪು ಬಗ್ಗೆ ಬರೆದ ಹಾಗೆ ಚಿಕ್ಕ ದೇವರಾಯನ ಕತೆಯನ್ನೂ ಬರೆಯಲಿ ನೋಡೋಣ''ಎಂದು ಸವಾಲು ಹಾಕಿದರು. 

ಹಣಕಾಸು ಸಚಿವರ ನೇಮಕಕ್ಕೆ ಆಗ್ರಹ : ಈಗಾಗಲೇ ಸಿಎಂ ಬಳಿ 8ರಿಂದ 10 ಖಾತೆಗಳಿವೆ. ಯಾವ ಯಾವ ಇಲಾಖೆಗಳು ಸಿಎಂ ಬಳಿ ಇರುತ್ತದೆಯೋ ಅವುಗಳೆಲ್ಲಾ ಸತ್ತು ಹೋಗುತ್ತವೆ. ಯಾವ ಇಲಾಖೆಗಳಿಗೂ ನ್ಯಾಯ ಒದಗಿಸಲು ಆಗುವುದಿಲ್ಲ. ಈ ಹಿಂದೆ ದೇವರಾಜ ಅರಸು, ವೀರಪ್ಪ ಮೊಯ್ಲಿ ಅಂತವರು ಹಣಕಾಸು ಖಾತೆಯನ್ನು ತಾವೇ ನಿಭಾಯಿಸದೆ ಇತರರಿಗೆ ನೀಡಿದ್ದರು.ಹಣಕಾಸು ಖಾತೆ ನಿಭಾಯಿಸಲು ಹೆಚ್ಚು ಸಮಯಬೇಕು. ಆದರೆ ಸಿಎಂಗೆ ಹೆಚ್ಚು ಸಮಯ ಕೊಡಲು ಸಾಧ್ಯವಾಗುತ್ತಿಲ್ಲ.ಈ ಹಿನ್ನೆಲೆ ಸಿಎಂ ತಮ್ಮ ಬಳಿ ಇರುವ ಹಣಕಾಸು ಖಾತೆಯನ್ನ ಬೇರೆಯವರಿಗೆ ನೀಡಬೇಕು ಎಂದು ವಿಶ್ವನಾಥ್ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.

Similar News