ಹೆರಿಗೆ ಮಾಡಿಸಿದ್ದಕ್ಕೆ ಲಂಚದ ಬೇಡಿಕೆ ಆರೋಪ: ಇಬ್ಬರು ವೈದ್ಯರ ಅಮಾನತು

ವೈದ್ಯೆಯ ವಿರುದ್ಧ ಇಲಾಖಾ ತನಿಖೆ ನಡೆಸಲು ಆದೇಶಿಸಲಾಗಿದೆ: ಸಚಿವ ಸುಧಾಕರ್

Update: 2022-11-26 14:26 GMT

ಬೆಂಗಳೂರು, ನ. 26: ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಿದ್ದಕ್ಕೆ 6 ಸಾವಿರ ರೂ.ಲಂಚ ನೀಡುವಂತೆ ಬೇಡಿಕೆ ಇಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ.ಶಶಿಕಲಾ ಹಾಗೂ ಡಾ.ಐಶ್ವರ್ಯ ಅವರನ್ನು ಸೇವೆಯಿಂದ ಅಮಾನತು ಗೊಳಿಸಲಾಗಿದ್ದು, ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

ಬಿಡದಿಯ ಮಂಜುನಾಥ್ ಎಂಬವರ ಪತ್ನಿ ರೂಪಾ ಅವರಿಗೆ ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿತ್ತು. ನಾಲ್ಕು ದಿನಗಳ ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಂದರ್ಭದಲ್ಲಿ ವೈದ್ಯರು ಮೂರು ಜನರಿಗೆ ತಲಾ ಎರಡು ಸಾವಿರ ರೂ.ಗಳಂತೆ 6 ಸಾವಿರ ರೂ. ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದನ್ನು ಮಂಜುನಾಥ್ ತಮ್ಮ ಮೊಬೈಲ್‍ಫೋನ್‍ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಮಂಜುನಾಥ್ ಅವರು ನನ್ನ ಬಳಿ 2 ಸಾವಿರ ರೂಪಾಯಿ ಮಾತ್ರ ಇದೆ ಎಂದು ಹೇಳುತ್ತಾರೆ. ಇದಕ್ಕೆ ಒಪ್ಪದ ವೈದ್ಯರು ನೀವು ಬರಿ ಎರಡು ಸಾವಿರ ಕೊಟ್ಟರೆ ನಾವು ಎಲ್ಲರಿಗೂ 500 ರೂಪಾಯಿ ಹಂಚೋಕೆ ಆಗಲ್ಲ. ನನಗೆ ಎರಡು, ಅವರಿಗೆ ಎರಡು ಹಾಗೂ ಮತ್ತೊಬ್ಬರಿಗೆ ಎರಡು ಸಾವಿರ ರೂಪಾಯಿ ಕೊಡಬೇಕು ಎನ್ನುತ್ತಾರೆ. ಇದಕ್ಕೆ ದನಿಗೂಡಿಸುವ ಮತ್ತೊಬ್ಬ ವೈದ್ಯರು ನೀವು ಒಬ್ಬರು ಹೀಗೆ ಮಾಡಿದರೆ, ವಾರ್ಡ್‍ನಲ್ಲಿ ಇರುವ ಎಲ್ಲರೂ ಹಾಗೆಯೆ ಮಾಡುತ್ತಾರೆ. ನಾವು ಹಾಗೆಲ್ಲ ತಾರತಮ್ಯ ಮಾಡಲು ಆಗಲ್ಲ ಎನ್ನುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಲಾಜಿಲ್ಲದೆ ಕರ್ತವ್ಯದಿಂದ ವಜಾ: ಸರಕಾರಿ ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂತಹ ಭ್ರಷ್ಟಾಚಾರ, ಅಶಿಸ್ತು, ಕರ್ತವ್ಯ ನಿರ್ಲಕ್ಷ್ಯವನ್ನ ಸಹಿಸುವುದಿಲ್ಲ. ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಮನೋಧರ್ಮ ಇಲ್ಲದ ವೈದ್ಯರು, ಸಿಬ್ಬಂದಿಗಳನ್ನು ಮುಲಾಜಿಲ್ಲದೆ ಕರ್ತವ್ಯದಿಂದ ವಜಾ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಮ್ಮ ಸಮಾಜದಲ್ಲಿ ಇಂತಹ ಕೆಲ ವೈದ್ಯರ ನಡೆಯಿಂದ, ಇಡೀ ವೈದ್ಯ ವೃತ್ತಿಗೆ, ಸರಕಾರಿ ಆಸ್ಪತ್ರೆಗಳಿಗೆ ಕಳಂಕ ತರುವ ಪರಿಸ್ಥಿತಿ ಎದುರಾಗಿರುವುದು ದುರಾದೃಷ್ಟಕರ. ಸರಕಾರಿ ಆಸ್ಪತ್ರೆಗಳ ನ್ಯೂನ್ಯತೆಗಳು ಎಷ್ಟೇ ಇದ್ದರೂ ಅವು ಇಂದಿಗೂ ನಮ್ಮ ಸಮಾಜದ ಅನೇಕ ಬಡ, ಕೆಳ-ಮಧ್ಯಮ ವರ್ಗ ಜನರ ಪಾಲಿಗೆ ಸಂಜೀವಿನಿಯಾಗಿದೆ ಎಂದು ತಿಳಿಸಿದ್ದಾರೆ.

ಸರಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಸೇವಾ ಮನೋಭಾವದಿಂದ ಚಿಕಿತ್ಸೆ ಅರಸಿ ಬರುವವರಿಗೆ ಆಸರೆಯಾಗಬೇಕು. ಕೇವಲ ಸುಸಜ್ಜಿತ ಕಟ್ಟಡಗಳು, ಅತ್ಯಾಧುನಿಕ ಉಪಕರಣಗಳು, ಅತ್ಯುತ್ತಮ ಭೌತಿಕ ಮೂಲಸೌಕರ್ಯಗಳಿಂದ ಒಂದು ಒಳ್ಳೆಯ ಆಸ್ಪತ್ರೆಯಾಗುವುದಿಲ್ಲ. ಸೇವಾ ಮನೋಭಾವ, ಸಾಮಾಜಿಕ ಕಳಕಳಿ, ಮಾನವೀಯತೆ ಉಳ್ಳ ವೃತ್ತಿಪರ ವೈದ್ಯರಿಂದ ಒಂದು ಆಸ್ಪತ್ರೆ ಒಳ್ಳೆಯ ಆಸ್ಪತ್ರೆ ಎನಿಸಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

Similar News