ಮೈಸೂರಿನಲ್ಲಿ ಇನ್ನು ಮುಂದೆ ಬಾಡಿಗೆ ಮನೆ ಪಡೆಯಬೇಕಿದ್ದರೆ ಹೊಸ ಕಾನೂನು; ಮಾಲಕರಿಗೆ ನಗರ ಪೊಲೀಸ್ ಆಯುಕ್ತರ ಸೂಚನೆ

Update: 2022-11-26 17:39 GMT

ಮೈಸೂರು,ನ.26: ಬಾಡಿಗೆ ಮನೆ ಮತ್ತು ರೂಮ್‍ಗಳು, ಪಿಜಿಗಳಲ್ಲಿ ಇರುವವರು ತಮ್ಮ ಪೂರ್ವಾಪರ ಮಾಹಿತಿಯನ್ನು ಒಂದು ತಿಂಗಳೊಳಗೆ ಪೊಲೀಸರಿಗೆ ನೀಡಬೇಕು ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದ್ದಾರೆ. 

ನಗರದ ತಮ್ಮ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ನಗರ ಪೊಲೀಸ್ ವೆಬ್‍ಸೈಟ್‍ನಲ್ಲಿ ಮತ್ತು ನಗರದ ಎಲ್ಲಾ ಠಾಣೆಗಳಲ್ಲಿ ಸುರಕ್ಷಾ ಮನೂನೆ-1 ಸಿಗಲಿದೆ. ಇದನ್ನು ಪಡೆದುಕೊಂಡು ನಾವು ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಬೇಕು, ಇದರ ಜೊತೆಗೆ ಬಾಡಿಗೆದಾರರ ಯಾವುದಾದರೂ ಒಂದು (ಆಧಾರ್ ಕಾರ್ಡ್, ಪಾಸ್ ಪೋರ್ಟ್, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಪಡಿತರ ಚೀಟಿ) ಗುರುತಿನ ಚೀಟಿ ಜೆರಾಕ್ಸ್ ಅನ್ನು ಲಗತ್ತಿಸಬೇಕು ಮುಂದಿನ ದಿನಗಳಲ್ಲಿ ಆನ್ ಲೈನ್  ಅಲ್ಲಿಯೇ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಹೀಗೆ ನೀಡುವ ನಮೂನೆಗಳನ್ನು ಮತ್ತು ಗುರುತಿನ ಚೀಟಿಯನ್ನು ಪೊಲೀಸರು ಪರಿಶೀಲಿಸುವರು. ಇದಕ್ಕೆ ನಗರ ಪಾಲಿಕೆ ಅಧಿಕಾರಿಗಳ ಸಹಕಾರವನ್ನು ಕೇಳಿದ್ದೇವೆ ಮಾಹಿತಿಯನ್ನು ನೀಡದೇ ಉದಾಸೀನ ಮಾಡಿದರೆ ಮುಂದೆ ಯಾವುದೇ ಅನಾಹುತವಾದರೂ ಅದಕ್ಕೆ ಮಾಲಕರು ಮತ್ತು ಪಿಜಿ  ನಡೆಸುವವರು ಹೊಣೆಯಾಗುತ್ತಾರೆ. ಬಾಡಿಗೆದಾರರು ನಕಲಿ ದಾಖಲೆಗಳನ್ನು ನೀಡುತ್ತಿದ್ದಾರೆ ಎಂಬ ಅನುಮಾನವಿದ್ದರೆ ಆಯಾ ಠಾಣೆ ಪೊಲೀಸರಿಗೆ ತಿಳಿಸಿ ಅನುಮಾನ ಪರಿಹರಿಸಿಕೊಳ್ಳಿ ಎಂದು ತಿಳಿಸಿದರು.

ಮಾಲಕರ ಮೇಲೆ ಕ್ರಮ: ಹೋಟೆಲ್ ಲಾಡ್ಜ್, ಹೋಂ ಸ್ಟೇಗಳಲ್ಲಿಯೂ ಯಾವುದೇ ವ್ಯವಸ್ಥಿತವಾದ ದಾಖಲೆ ಇಲ್ಲದೆ ಯಾರಿಗಾದರೂ ರೂಮ್‍ಗಳನ್ನು ನೀಡುವುದು ಉಳಿದುಕೊಳ್ಳಲು ಅವಕಾಶ ನೀಡುವುದು ಮಾಡುವಂತಿಲ್ಲ, ನಮ್ಮ ಸಿಬ್ಬಂದಿಗಳು ನಿತ್ಯ ಪರಿಶೀಲನೆ ಮಾಡಲಿದ್ದು, ದಾಖಲೆ ಇಲ್ಲದೆ ಯಾರಿಗಾದರೂ ಉಳಿಯಲು ಅವಕಾಸ ನೀಡುವುದು ಕಂಡು ಬಂದಲ್ಲಿ ಮಾಲಕರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.

''ಗಡಿಪಾರು ಮಾಡುತ್ತೇವೆ'': ನಗರದ ಮೊಹಲ್ಲಾಗಳಲ್ಲಿ ಸಾರ್ವಜನಿಕ ಸಭೆಗಳನ್ನು ಮಾಡಲಿದ್ದು, ಸಾರ್ವಜನಿಕರು ಕುಂದುಕೊರತೆಗಳನ್ನು ತಿಳಿಸಬಹುದು. ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ರೌಡಿ ಶೀಟರ್ಗಳ ಪೆರೇಡ್ ಹೆಚ್ಚಿಸಲಾಗುವುದು. ಅವರಿಗೆ ತಿಳುವಳಿಕೆ ಹೇಳಲಾಗುವುದು. ಕೇಳದೆ ಅವರ ಚಟುವಟಿಕೆಯನ್ನು  ಮುಂದುವರೆಸಿದರೆ ಗಡಿಪಾರು ಮಾಡುವ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು  ಹೇಳಿದರು.

ನಗರಕ್ಕೆ ಪ್ರವೇಶಿಸುವ 9 ಪಾಯಿಂಟ್‍ಗಳಲ್ಲಿ ಇನ್ ಅಂಡ್ ಔಟ್ ಆಗುವವರ ಬಗ್ಗೆ ನಮ್ಮ ಸಿಬ್ಬಂದಿ ಪರಿಶೀಲಿಸಿ ವಿಳಾಸ ನಮೂದಿಸಿಕೊಳ್ಳುತ್ತಾರೆ. ನಗರದ ಒಳಗೆ 23 ಪಾಯಿಂಟ್‍ಗಳನ್ನು ಮಾಡಿದ್ದು, ನಮ್ಮ ಸಿಬ್ಬಂದಿ ಅನುಮಾನಾಸ್ಪದವಾಗಿ ಕಂಡು ಬಂದವರನ್ನು ಪರಿಶೀಲಿಸುವರು, ನಗರ ಪಾಲಿಕೆಯಿಂದ ರಾತ್ರಿ 11 ಗಂಟೆಯ ನಂತರವೂ ತೆರೆದಿರಬಹುದಾದ ಅಂಗಡಿಗಳನ್ನು ಬಿಟ್ಟು ಉಳಿದ ಎಲ್ಲಾ ಅಂಗಡಿಗಳು ರಾತ್ರಿ 11 ಗಂಟೆಯ ಹೊತ್ತಿಗೆ ಮುಚ್ಚಲೇಬೇಕು. ಇಲ್ಲವಾದರೆ ಕ್ರಮ ಕೈಗೊಳ್ಳಲು ಎಲ್ಲಾ ಠಾಣೆಯ ಪೊಲೀಸರಿಗೆ ಸೂಚಿಸಿದ್ದೆನೆ ಎಂದರು.

ವಾಹನ ದಟ್ಟಣೆ ಮತ್ತು ವ್ಯಾಪಾರ ವಹಿವಾಟು ನಡೆಯುವ ಸ್ಥಳಗಳಲ್ಲಿ ವ್ಯವಸ್ಥಿತವಾದ ಪಾರ್ಕಿಂಗ್ ಅವಕಾಶ ಮಾಡಿಕೊಡಲು ಅಪರಾಧ ಮತ್ತು ಸಂಚಾರ ವಿಭಾದ ಡಿಸಿಪಿ ಸಂಚಾರ ವಿಭಾಗದ ಎಸಿಪಿ ಅವರಿಗೆ ಹೇಗೆ ಮಾಡಬಹುದು ಎಂದು ಪ್ರಸ್ತಾವನೆ ನೀಡಲು ಹೇಳಿದ್ದೇನೆ.  ಇದನ್ನು ನೋಡಿ ಆ ನಂತರ ಯೋಜನೆ   ಕೈಗೊಳ್ಳುತ್ತೇನೆ ಎಂದು  ಹೇಳಿದರು.

''ನಾನು ಕೂಡ ಮಧ್ಯಾಹ್ನ 12.30 ರಿಂದ ಸಂಜೆ 6 ಗಂಟೆಯವರೆಗೂ ಸಾರ್ವಜನಿಕರ ಭೇಟಿಗೆ ಸಿಗಲಿದ್ದು, ಏನಾದರೂ ದೂರುಗಳು ಇದ್ದರೆ ದಿನನಿತ್ಯ ಎರಡು ಗಂಟೆ ಠಾಣೆಗೆ ಬರುವ ಸಾರ್ವಜನಿಕರ  ಸಮಸ್ಯೆ ಆಲಿಸಲು ಸಮಯ ನಿಗದಿ ಮಾಡಿಕೊಳ್ಳಲು ಜನಸ್ನೇಹಿಯಾಗಿರಲು ಹೇಳಿದ್ದೇನೆ. ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟಕ್ಕೆ ಸಂಬಂಧಪಟ್ಟಂತೆ ಮಂಗಳೂರು ಪೊಲೀಸರೆ ಇಲ್ಲಿಯೂ ತನಿಖೆ ಮಾಡುತ್ತಿದ್ದಾರೆ. ಅವರಿಗೆ ಬೇಕಾದ ಸಹಕಾರವನ್ನು ಅಷ್ಟೇ ನಾವು ನೀಡಿದ್ದೇವೆ. ಹಾಗಾಗಿ, ಈ ಬಗ್ಗೆ ನಾನು ಏನು ಮಾತನಾಡುವುದಿಲ್ಲ''

 -ರಮೇಶ್ ಬಾನೋತ್, ನಗರ ಪೊಲೀಸ್ ಆಯುಕ್ತ, ಮೈಸೂರು.

Similar News