ಕರ್ನಾಟಕಕ್ಕೆ ಮಹಾರಾಷ್ಟ್ರದ ಕೆಲ ಜಿಲ್ಲೆಗಳನ್ನು ಸೇರ್ಪಡೆ ಮಾಡಿದ 'ನಕ್ಷೆ'ಯ ಫೋಟೊ ವೈರಲ್

Update: 2022-11-26 16:35 GMT

ಬೆಳಗಾವಿ, ನ. 26: ‘ಗಡಿ’ ಸಮಸ್ಯೆಗೆ ಸಂಬಂಧಿಸಿದಂತೆ ರಾಜಕೀಯ ಮುಖಂಡರ ಪರ-ವಿರೋಧ ಹೇಳಿಕೆಗಳ ಬೆನ್ನಲ್ಲೇ ಕೆಎಸ್ಸಾರ್ಟಿಸಿ ಬಸ್ ಮೇಲೆ ಮಹಾರಾಷ್ಟ್ರದಲ್ಲಿ ಕಲ್ಲು ತೂರಾಟ ನಡೆಸಲಾಗಿದೆ. ಈ ಮಧ್ಯೆ ಮಹಾರಾಷ್ಟ್ರದ ಕೆಲ ಜಿಲ್ಲೆಗಳನ್ನು ಜೊಡಿಸಿ ಕರ್ನಾಟಕದ ಹೊಸ ನಕ್ಷೆ ಸಿದ್ಧಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ.

‘ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಿಸಬೇಕು’ ಎಂಬ ಅಲ್ಲಿನ ರಾಜಕೀಯ ನಾಯಕರ ಹೇಳಿಕೆಗೆ ತಿರುಗೇಟು ನೀಡಲು ಮಹಾರಾಷ್ಟ್ರದಲ್ಲಿ ವಾಸಿಸುವ ಕನ್ನಡಿಗರು, ಹೊಸ ನಕ್ಷೆ ಸಿದ್ಧಪಡಿಸಿ ತಿರುಗೇಟು ನೀಡಿದ್ದಾರೆ. ಕರ್ನಾಟಕದ ನಕ್ಷೆಗೆ ಮಹಾರಾಷ್ಟ್ರದ ಕೆಲ ಜಿಲ್ಲೆಗಳನ್ನು ಸೇರಿಸಿ ಹೊಸ ನಕ್ಷೆ ತಯಾರು ಮಾಡಲಾಗಿದೆ. ಈ ಹೊಸ ನಕ್ಷೆ ಗಡಿಭಾಗದಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರದ ಕೊಲ್ಲಾಪೂರ, ಸೋಲಾಪುರ, ಉಸ್ಮಾನಬಾದ್, ಲಾತೂರು, ಸಾಂಗ್ಲಿ ಜಿಲ್ಲೆಗಳನ್ನು ಹೊಸ ನಕ್ಷೆಯಲ್ಲಿ ಸೇರಿಸಲಾಗಿದೆ. ನಿನ್ನೆಯಷ್ಟೇ ರಾಜ್ಯದ ಸಾರಿಗೆ ವಾಹನಗಳ ಮೇಲೆ ಜೈ ಮಹಾರಾಷ್ಟ್ರ ಘೋಷಣೆಗಳನ್ನು ಮತ್ತು ಕಪ್ಪು ಮಸಿ ಬಳಿದಿದ್ದ ಮಹಾರಾಷ್ಟ್ರ ಪುಂಡರಿಗೆ ರಾಜ್ಯದ ಕನ್ನಡಿಗರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮತ್ತೆ ಕರ್ನಾಟಕ ಸಾರಿಗೆ ಬಸ್ ಮೇಲೆ ಕಲ್ಲು ತೂರಾಟ


‘ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರತ್ ಪವರ್ ಬೆಳಗಾವಿ ಗಡಿ ವಿವಾದವನ್ನು ಇಟ್ಟುಕೊಂಡು ಇದುವರೆಗೂ ರಾಜಕೀಯ ಮಾಡುತ್ತಿದ್ದಾರೆ. ಬೆಳಗಾವಿಯ ಬಗೆಗಿನ ಅವರ ಕನಸು ನನಸಾಗುವುದಿಲ್ಲ. ಮಹಾರಾಷ್ಟ್ರದ ಜತ್ತ ಭಾಗದ ಕನ್ನಡಿಗರು ಕರ್ನಾಟಕದಲ್ಲಿ ವಿಲೀನವಾಗಲು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

Similar News