ಮಲೆನಾಡಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಬದ್ಧ: ಕೊಪ್ಪ ಜನಸಂಕಲ್ಪಯಾತ್ರೆಯಲ್ಲಿ ಸಿಎಂ ಬೊಮ್ಮಾಯಿ ಭರವಸೆ

Update: 2022-11-27 14:31 GMT

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದ ರೈತರ ಸಮಸ್ಯೆ, ಅರಣ್ಯ, ಕಂದಾಯ ಭೂಮಿ ಸಮಸ್ಯೆ, ಕಾಡಾನೆಗಳ ಹಾವಳಿ ನಿಯಂತ್ರಣದಂತಹ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರಕಾರ ಬದ್ಧವಾಗಿದ್ದು, ಈ ಸಂಬಂಧ ಸರಕಾರ ಅಗತ್ಯ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರವಿವಾರ ಜಿಲ್ಲೆಯ ಶೃಂಗೇರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೊಪ್ಪ ಪಟ್ಟಣದಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಜನಸಂಕಲ್ಪಯಾತ್ರೆಯಲ್ಲಿ ಮಾತನಾಡಿದ ಅವರು, ಮಲೆನಾಡಿನ ಜ್ವಲಂತ ಸಮಸ್ಯೆಗಳಿಗೆ ರಾಜ್ಯ ಸರಕಾರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಕಾಫಿ ಬೆಳೆಗಾರರ ಒತ್ತುವರಿ ಸಮಸ್ಯೆ ಪರಿಹಾರಕ್ಕೆ ಒತ್ತುವರಿ ಭೂಮಿಯನ್ನು ಲೀಸ್‍ಗೆ ನೀಡುವ ಯೋಜನೆಯನ್ನು ಸರಕಾರ ಜಾರಿ ಮಾಡಲಿದೆ ಎಂದ ಅವರು, ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರು ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗದಿಂದ ಹೈರಾಣಾಗಿದ್ದು, ಈ ರೋಗ ನಿವಾರಣೆಗಾಗಿ ಸರಕಾರ ಈಗಾಗಲೇ 10 ಕೋ. ರೂ. ಅನುದಾನ ಬಿಡುಗಡೆ ಮಾಡಿ ರೋಗನಿಯಂತ್ರಣಕ್ಕೆ ಅಗತ್ಯ ಔಷಧ ಪೂರೈಕೆ ಮಾಡಲು ಕ್ರಮವಹಿಸಲಾಗಿದೆ. ಅಲ್ಲದೇ ರಾಜ್ಯ ಹಾಗೂ ಕೇಂದ್ರದ ವಿಜ್ಞಾನಿಗಳು ಈ ರೋಗಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದು, ಅವರು ನೀಡುವ ವರದಿ ಆಧರಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಿದ್ದು, ಕಡಾನೆಗಳ ಹಾವಳಿ ನಿಯಂತ್ರಣಕ್ಕೆ ಆನೆ ನಿಗ್ರಹ ದಳ ನಿಯೋಜಿಸಿ ಅದಕ್ಕೆ ಬೇಕಾದ ಅನುದಾನ, ಸಿಬ್ಬಂದಿ, ಪರಿಕರಗಳನ್ನು ಒದಗಿಸಲಾಗುತ್ತಿದ್ದು, ಮಲೆನಾಡು ಭಾಗದಲ್ಲಿ ಮಾನವ-ಕಾಡು ಪ್ರಾಣಿಗಳ ಸಂಘರ್ಷ ತಪ್ಪಿಸಲು ವಿಶೇಷ ಯೋಜನೆ ರೂಪಿಸಲಾಗಿದೆ ಎಂದ ಅವರು, ಅತಿವೃಷ್ಟಿ ಹಾನಿ ಸಂಬಂಧ ರಾಜ್ಯ ಸರಕಾರ ಜಿಲ್ಲೆಗೆ ಈಗಾಗಲೇ 5 ಕೋ. ರೂ. ಅನುದಾನ ನೀಡಿದ್ದು, ಮತ್ತೆ 5 ಕೋ.ರೂ. ಮಂಜೂರು ಮಾಡಲು ಕ್ರಮವಹಿಸಲಾಗಿದೆ. ಬೆಳೆ ನಷ್ಟಕ್ಕೆ ಸರಕಾರ ಕೇಂದ್ರ ನೀಡುವ ಅನುದಾನದೊಂದಿಗೆ ಹೆಚ್ಚುವರಿ ಅನುದಾನ ನೀಡಿ ಬೆಳೆ ಪರಿಹಾರ ನೀಡಲಾಗಿದೆ ಎಂದರು.

ಶಿಕ್ಷಣ, ಉದ್ಯೋಗ ಹಾಗೂ ರಾಜ್ಯದ ಎಲ್ಲ ಜನರ ಸಬಲೀಕರಣವೇ ಬಿಜೆಪಿ ಸರಕಾರದ ಮುಖ್ಯ ಧ್ಯೇಯವಾಗಿದ್ದು, ಸರಕಾರ ರೈತರ ಮಕ್ಕಳ ಶಿಕ್ಷಣಕ್ಕಾಗಿ ಜಾರಿ ಮಾಡಿರುವ ವಿದ್ಯಾಸಿರಿ ಯೋಜನೆಯನ್ನು ಕಾರ್ಮಿಕರು, ಮೀನುಗಾರರು, ಆಟೊ ಚಾಲಕರು, ಟೈಲರ್‍ಗಳ ಮಕ್ಕಳಿಗೂ ವಿಸ್ತರಿಸಲಾಗುವುದು ಎಂದ ಅವರು, ರಾಜ್ಯಾದ್ಯಂತ ವಿವೇಕ ಯೋಜನೆಯಡಿಯಲ್ಲಿ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುವ ಯೋಜನೆಗೆ ಚಾಲನೆ ನೀಡಲಾಗಿದೆ. ರಾಜ್ಯಾದ್ಯಂತ 100 ಎಸ್ಸಿ, ಎಸ್ಟಿ ಹಾಸ್ಟೇಲ್‍ಗಳನ್ನು ನಿರ್ಮಿಸಿದ್ದು, 55 ಕನಕದಾಸ ಹಾಸ್ಟೇಲ್‍ಗಳು ಹಾಗೂ ನಾರಾಯಣ ಗುರುಗಳ ಹೆಸರಿನಲ್ಲಿ ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಸುಧಾರಣೆ ತರಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಉದ್ಯೋಗಗಳ ಸೃಷ್ಟಿಸಿ ಸರಕಾರ ಒತ್ತು ನೀಡಿದ್ದು, ಪ್ರತೀ ಗ್ರಾಮಗಳಲ್ಲಿ ತಲಾ 2 ಮಹಿಳಾ ಹಾಗೂ ಯುವ ಸಂಘಗಳಿಗೆ ತಲಾ 5 ಲಕ್ಷ ರೂ. ಸಹಾಧನ ನೀಡಿ ಉದ್ಯೋಗ ಸೃಷ್ಟಿಸುವ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದ ಅವರು, ಕಾಯಕ ಯೋಜನೆಯಡಿ ಕುಂಬಾರಿಕೆ, ನೇಕಾರಿಗೆ ಸೇರಿದಂತೆ 23 ವೃತ್ತಿ ಕಸುಬುದಾರರ ಸಬಲೀಕರಣಕ್ಕೆ ಆಧ್ಯತೆ ನೀಡಲಾಗುವುದು ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರಕ್ಷಕರು ಎಂದು ಬಿಂಬಿಸಿಕೊಳ್ಳುವ ಕಾಂಗ್ರೆಸಿಗರು, ಹಾಸ್ಟೇಲ್ ವಿದ್ಯಾರ್ಥಿಗಳ ಹಾಸಿಗೆ, ದಿಂಬಿನಲ್ಲೂ ಭ್ರಷ್ಟಾಚಾರ ಮಾಡಿದರು. ನೀರಾವರಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದರು. ತಮ್ಮ ಮೇಲಿದ್ದ ಭ್ರಷ್ಟಾಚಾರ ಪ್ರಕರಣ ಮುಚ್ಚಿಕೊಳ್ಳಲು ಲೋಕಾಯುಕ್ತ ಸಂಸ್ಥೆಯನ್ನು ಮುಂಚಿ ಎಸಿಬಿ ರಚಿಸಿ ಪ್ರಕರಣಗಳಿಗೆ ಬಿ ರೀಪೋರ್ಟ್ ಹಾಕಿಸಿದರು ಎಂದು ಟೀಕಿಸಿದ ಅವರು, ರಾಜ್ಯದ ಭವ್ಯ ಭವಿಷ್ಯದ ದೃಷ್ಟಿಯಿಂದ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತು ಹಾಕಲು ಮತದಾರರ ಮುಂದಾಗಿದ್ದಾರೆ ಎಂದರು.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಭಾಷಣದಲ್ಲಿ ದತ್ತಪೀಠದ ಬಗ್ಗೆ ಪ್ರಸ್ತಾಪಿಸಿ, ದತ್ತಪೀಠ ಹಿಂದೂಗಳ ಭಾವನೆಯ ದೇವಸ್ಥಾನ, ಹಿಂದೂ ಅರ್ಚಕರ ನೇಮಕ ಸಂಬಂಧ ಸುದೀರ್ಘ ಹೋರಾಟ ನಡೆಸಿದ್ದು, ದತ್ತಪೀಠಕ್ಕೆ ಒಳ್ಳೆಯ ದಿನಗಳು ಬರುತ್ತಿದೆ. ಕಾನೂನಾತ್ಮಕ ಅಡೆ ತಡೆಗಳನ್ನು 2-3 ದಿನಗಳಲ್ಲಿ ನಿವಾರಿಸಲಾಗುವುದು ಎಂದರು.

ಮಾಜಿ ಮುಖ್ಯಮಂತ್ರಿ, ಸಂಸದೀಯ ಸಲಹ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಸದ್ಯ ಎರಡು ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಮುಂಬರುವ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆ ಎರಡು ರಾಜ್ಯಗಳಲ್ಲೂ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಧೂಳಿಪಟವಾಗಲಿದೆ. ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ, 63ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್‍ನವರು ಭ್ರಷ್ಟಾಚಾರ ನಡೆಸಿದರೇ ವಿನಃ ದೇಶದ ಅಭಿವೃದ್ಧಿ ಮಾಡಿಲ್ಲ. ಸದ್ಯ ಹಣ ಹೆಂಡ, ತೋಳ್ಬಲದಿಂದ ಚುನಾವಣೆ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಡಿಕೆಶಿ, ಸಿದ್ದು ನಡುವೆ ನಾನೇ ಸಿಎಂ ಎಂಬ ಬಗ್ಗೆ ಚರ್ಚೆ ಆರಂಭವಾಗಿದ್ದು, ಅವರ ಕನಸು ನನಸಾಗಲ್ಲ ಎಂದ ಅವರು, ಸಿದ್ದರಾಮಯ್ಯ ಅವರು ಸುಳ್ಳು ಭರವಸೆಗಳನ್ನು ನೀಡಿ ರೈತರು ಮತ್ತು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದು, ಜನರು ಯಾವುದೇ ಕಾರಣಕ್ಕೂ ಅವರನ್ನು ಕ್ಷಮಿಸುವುದಿಲ್ಲ. ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರ ಹಿಡಿಯಲಿದೆ ಎಂದರು.

ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ತರೀಕೆರೆ ಶಾಸಕ ಡಿ.ಎಸ್.ಸುರೇಶ್, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮುರಡಪ್ಪ ಸೇರಿದಂತೆ ಮತ್ತಿತರಿದ್ದರು.

ಶೃಂಗೇರಿ ಕ್ಷೇತ್ರದ ಶಾಸಕರು ವ್ಯಾಪಕ ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ಅವರು ಆದಾಯ ಮೀರಿ ಜಮೀನು ಖರೀದಿ ಮಾಡಿರುವ ಬಗ್ಗೆ ದೂರು ಕೇಳಿ ಬಂದಿದ್ದು, ಈ ಸಂಬಂಧ ಸ್ಥಳೀಯರು ತನಗೆ ದೂರು ನೀಡಿದ್ದು, ಅಕ್ರಮವಾಗಿ ಜಮೀನು ಖರೀದಿ ಮಾಡಿರುವ ಬಗ್ಗೆ ತನಿಖೆ ನಡೆಸಲಾಗುವುದು.
- ಬಸವರಾಜ್ ಬೊಮ್ಮಾಯಿ, ಮುಖ್ಯಮಂತ್ರಿ
 
ದತ್ತಪೀಠಕ್ಕೆ ಎರಡು ಮೂರು ದಿನಗಳಲ್ಲಿ ಹಿಂದೂ ಅರ್ಚಕರ ನೇಮಕ: ದತ್ತಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಿಸಬೇಕೆಂದು ಅನೇಕ ವರ್ಷಗಳಿಂದ ಹೋರಾಟ ನಡೆಸಿದ್ದು, ಶೀಘ್ರದಲ್ಲೇ ಹಿಂದೂ ಅರ್ಚಕರನ್ನು ನೇಮಿಸಿ ಈ ಬಾರಿಯ ದತ್ತ ಜಯಂತಿ ದಿನ ಹಿಂದೂ ಅರ್ಚಕರಿಂದಲೇ ಪೂಜೆ ನಡೆಸಲಾಗುವುದು. ಈ ಸಂಬಂಧ ಇರುವ ಕಾನೂನು ಅಡೆತಡೆಗಳನ್ನು ಎರಡು ಮೂರು ದಿನಗಳಲ್ಲಿ ನಿವಾರಣೆಯಾಗಲಿದ್ದು, ಶೀಘ್ರ ಹಿಂದೂ ಅರ್ಚಕರ ನೇಮಕ ಆದೇಶ ಹೊರಬೀಳಲಿದೆ.
- ಸಿ.ಟಿ.ರವಿ, ಶಾಸಕ

Similar News