ಚಿಕ್ಕಮಗಳೂರು: ಅಡಿಕೆ ಎಲೆಚುಕ್ಕಿ ರೋಗದಿಂದ ಬೇಸತ್ತು ರೈತ ಆತ್ಮಹತ್ಯೆ

Update: 2022-11-28 07:05 GMT

ಚಿಕ್ಕಮಗಳೂರು: ಅಡಿಕೆ ಎಲೆಚುಕ್ಕಿ ರೋಗದಿಂದ ಬೇಸತ್ತು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಸುಗುಣಿ ಗ್ರಾಮದಲ್ಲಿ ರವಿವಾರ ಸಂಜೆ ನಡೆದಿರುವುದು ವರದಿಯಾಗಿದೆ.

ಶಂಕರೇಗೌಡ (55) ಮೃತ ರೈತ. ಇವರು ನಾಲ್ಕು ಎಕರೆ ಅಡಿಕೆ ತೋಟ ಹೊಂದಿದ್ದು, ಇತ್ತೀಚೆಗೆ ಇಡೀ ತೋಟಕ್ಕೆ ಎಲೆ ಚುಕ್ಕಿ ರೋಗ ಬಾಧಿಸಿದೆ. ರೋಗ ನಿಯಂತ್ರಣಕ್ಕೆ ಬಾರದೆ ಇಡೀ ತೋಟ ರೋಗಕ್ಕೆ ಹಬ್ಬಿದೆ. ಇದರಿಂದ ತೀವ್ರವಾಗಿ ಮನನೊಂದಿದ್ದರು. ಅಲ್ಲದೇ ಕೃಷಿಗಾಗಿ ಅವರು ಹಲವು ಜನರಿಂದ ಕೈಸಾಲವನ್ನೂ ಮಾಡಿದ್ದು, ಸಾಲ ತೀರಿಸುವುದು ಹೇಗೆಂದು ಚಿಂತೆಗೆ ಒಳಗಾಗಿದ್ದರೆಂದು ತಿಳಿದು ಬಂದಿದೆ.

ಇದರಿಂದ ಇತ್ತೀಚೆಗೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಶಂಕರೇಗೌಡ ರವಿವಾರ ಸಂಜೆ ತೋಟಕ್ಕೆಂದು ಹೋದವರು ಹಿಂದಿರುಗಿ ಬಂದಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮನೆಮಂದಿ ಹುಡುಕಾಟ ನಡೆಸಿದಾಗ ತೋಟದ ಸಮೀಪದ ಕಾಡಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಶಾಸಕ‌ ಕುಮಾರಸ್ವಾಮಿ ಮೃತ ರೈತನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

Similar News