ಸಿಸಿಬಿ ಪೊಲೀಸರ ಕೈಗೆ ಸಿಗದ ರೌಡಿ BJP ನಾಯಕರ ಕೈಗೆ ಸಿಕ್ಕಿದ್ದು ಹೇಗೆ?: ಕಾಂಗ್ರೆಸ್ ಪ್ರಶ್ನೆ

Update: 2022-11-28 12:27 GMT

ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಮಾಜಿ ರೌಡಿ ಸೈಲೆಂಟ್ ಸುನೀಲ್ ಯಾನೆ ಸುನೀಲ್ ಕುಮಾರ್ ಗೆ ಬಿಜೆಪಿ ಟಿಕೆಟ್ ನೀಡಲು ಮುಂದಾಗಿದೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ''ಬಿಜೆಪಿಯ ಕೃಪಾಕಟಾಕ್ಷದಿಂದ ಸೈಲೆಂಟ್ ಸುನಿಲ್ ಎಂಬ ರೌಡಿಯ ಮುಂದೆ ಈಗ ಪೊಲೀಸರೇ ಸೈಲೆಂಟ್ ಆಗಿದ್ದಾರೆ'' ಎಂದು ಆರೋಪಿಸಿದೆ. 

ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಕ್ರಿಮಿನಲ್‌ಗಳೊಂದಿಗೆ ಬಿಜೆಪಿಯ ನೆಂಟಸ್ತಿಕೆ ಇರುವಾಗ ರಾಜ್ಯದಲ್ಲಿ ಅಪರಾಧ ಪ್ರಕರಣ ಸಂಖ್ಯೆ ಏರದಿರುತ್ತದೆಯೇ? ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ, ರೌಡಿಗಳನ್ನು ಹಿಡಿಯುವ ಯೋಗ್ಯತೆ ನಿಮ್ಮ ಇಲಾಖೆಗೆ ಇಲ್ಲವೇ ಅಥವಾ ನೀವೇ ಪೊಲೀಸರನ್ನು ಕಟ್ಟಿಹಾಕಿದ್ದೀರಾ? ಸಿಸಿಬಿ ಪೊಲೀಸರ ಕೈಗೆ ಸಿಗದ ರೌಡಿ ಬಿಜೆಪಿ ನಾಯಕರ ಕೈಗೆ ಸಿಕ್ಕಿದ್ದು ಹೇಗೆ?'' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

''ಸೈಲೆಂಟ್ ಸುನಿಲನಿಗೆ ಪೊಲೀಸರು ಹುಡುಕುತ್ತಿರಲಿಲ್ಲವೇ? ಬಿಜೆಪಿ ನಾಯಕರೊಂದಿಗೆ ವೇದಿಕೆಯಲ್ಲಿದ್ದಾಗ ಅಲ್ಲಿ ಪೊಲೀಸರೀರಲಿಲ್ಲವೇ? ಬಂಧಿಸದಂತೆ ಪೊಲೀಸರಿಗೆ ತಡೆದವರು ಯಾರು? ಪೊಲೀಸರಿಗಿಂತ ರೌಡಿಗಳೇ ಪ್ರಭಾವಿಗಳಾದರೆ?'' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಪ್ರಶ್ನೆ ಮಾಡಿದೆ. 

ರವಿವಾರ ಸೈಲೆಂಟ್ ಸುನೀಲ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಬಿಜೆಪಿ ನಾಯಕರು ಮಾತ್ರ ಭಾಗಿಯಾಗಿದ್ದು, ಸುನೀಲ್  ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳಲಾಗಿತ್ತಿದೆ. 

ಇದನ್ನೂ ಓದಿ: ಮಾಜಿ ರೌಡಿ 'ಸೈಲೆಂಟ್' ಸುನೀಲ್‍ಗೆ ಬಿಜೆಪಿ ಟಿಕೆಟ್?

Similar News