ತನಿಖೆಗೆ ಅಡ್ಡಿಪಡಿಸಿದ ಕಾರಣಕ್ಕೆ ಜಾಮೀನು ರದ್ದು ಸಾಧ್ಯವಿಲ್ಲ: ಹೈಕೋರ್ಟ್

Update: 2022-11-28 13:24 GMT

ಬೆಂಗಳೂರು, ನ. 28: ಕ್ರಿಮಿನಲ್ ಕೇಸ್‍ನಲ್ಲಿ ಜಾಮೀನು ಪಡೆದಿರುವ ಆರೋಪಿಯ ಸಂಬಂಧಿಕರು ತನಿಖೆಗೆ ಸಹಕರಿಸದಂತೆ ಇತರೆ ಆರೋಪಿಗಳಿಗೆ(ಎರಡನೇ ಆರೋಪಿ) ಬೆದರಿಕೆ ಒಡ್ಡಿದಲ್ಲಿ, ಅದೇ ಕಾರಣಕ್ಕೆ ಆರೋಪಿಯ ಜಾಮೀನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಎನ್‍ಡಿಪಿಎಸ್ ಕಾಯಿದೆಯಡಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ರಾಯಚೂರು ಜಿಲ್ಲೆಯ ಅಬ್ದುಲ್ ಖಾದಿರ್ ಘೌಸ್ ಪೀರ್ ಎಂಬುವರ ಜಾಮೀನು ರದ್ದು ಮಾಡುವಂತೆ ಕೋರಿ ಮಾದಕ ವಸ್ತುಗಳ ನಿಯಂತ್ರಣ ಕಚೇರಿಯ ಗುಪ್ತಚರ ಅಧಿಕಾರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಹೇಳಿಕೆ ನೀಡಿದೆ.  

ಆರೋಪಿ ವಿರುದ್ಧ ಬಲವಾದ ಸಾಕ್ಷ್ಯಗಳಿದ್ದಲ್ಲಿ ಮಾತ್ರ ಜಾಮೀನು ರದ್ದು ಮಾಡಬಹುದು. ಅಲ್ಲದೇ, ಸುಪ್ರೀಂಕೋರ್ಟ್‍ನ ವಿವಿಧ ಆದೇಶಗಳನ್ನು ಪ್ರಸ್ತಾಪಿಸಿರುವ ನ್ಯಾಯಪೀಠ, ಆರೋಪಿತರ ಸಂಬಂಧಿಕರು ತನಿಖೆ ಅಥವಾ ವಿಚಾರಣೆಗೆ ಅಡ್ಡಿಪಡಿಸಿದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೇ ವಿನಹ, ಆರೋಪಿಗೆ ಮಂಜೂರಾಗಿರುವ ಜಾಮೀನು ರದ್ದು ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

ವಿದೇಶದಿಂದ ಬಂದಿರುವ ವಸ್ತು ಪ್ರತಿವಾದಿಯಾಗಿರುವ ಅಬ್ದುಲ್ ಖಾದಿರ್ ಘೌಸ್ ಪೀರ್ ಗೆ ಬಂದಿದೆ. ಅವರು ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಅಂಶ ತನಿಖೆ ವೇಳೆ ತಿಳಿದು ಬಂದಿದೆ. ನಂತರ ಆರೋಪಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಷರತ್ತುಗಳಲ್ಲಿ ಸಾಕ್ಷ್ಯಾಧಾರ ನಾಶ ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆ ಸೂಚನೆ ನೀಡಲಾಗಿತ್ತು.

ಆದರೆ, ಪ್ರತಿವಾದಿ ಸಹೋದರ ಮತ್ತವರ ಪತ್ನಿ ಪ್ರಕರಣದ ಎರಡನೇಯ ಆರೋಪಿಗೆ ತನಿಖೆ ಸಹಕರಿಸದಂತೆ ಒತ್ತಡ ಹೇರಿದ್ದಾರೆ. ಈ ಸಂಬಂಧ ಎರಡನೆ ಆರೋಪಿ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದು, ಅದನ್ನು ದಾಖಲಿಸಲಾಗಿದೆ. ಹೀಗಾಗಿ, ಜಾಮೀನು ರದ್ದು ಮಾಡಬೇಕು ಎಂದು ಎನ್‍ಸಿಬಿ ಗುಪ್ತಚರ ಅಧಿಕಾರಿಗಳು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿವಾದಿ ಪರವಾಗಿ ವಾದ ಮಂಡಿಸಿದ ವಕೀಲರು, ಪ್ರತಿವಾದಿ ಬೆದರಿಕೆ ಹಾಕಿಲ್ಲ. ಬದಲಿಗೆ ಅವರ ಸಹೋದರನ ಮೇಲಿನ ಆರೋಪವಾಗಿದೆ. ಅಲ್ಲದೇ ಎರಡನೆಯ ಆರೋಪಿ 2021ರ ನವೆಂಬರ್ ನಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ಎಲ್ಲ ಸಾಕ್ಷ್ಯಗಳನ್ನು ಆರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಹೀಗಿರುವಾಗ ಸಾಕ್ಷ ನಾಶದ ಆರೋಪ ಬರುವುದಿಲ್ಲ. ಹೀಗಾಗಿ ಈಗಾಗಲೇ ಮಂಜೂರಾಗಿರುವ ಜಾಮೀನು ರದ್ದು ಪಡಿಸುವುದಕ್ಕೆ ಅವಕಾಶವಿಲ್ಲ. ಹೀಗಾಗಿ, ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು. 

Similar News