ಡಬಲ್ ಇಂಜಿನ್ ಸರ್ಕಾರದವಿದ್ದರೂ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಯಾಕೆ ಪರಿಹರಿಸಲಿಲ್ಲ: ಸಿದ್ದರಾಮಯ್ಯ ಪ್ರಶ್ನೆ

Update: 2022-11-28 15:17 GMT

ಶಿವಮೊಗ್ಗ,ನ.28: ಡಬಲ್ ಇಂಜಿನ್ ಸರ್ಕಾರದವಿದ್ದರೂ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಯಾಕೆ ಪರಿಹರಿಸಲಿಲ್ಲ ಎಂದು ವಿರೋಧ ಪಕ್ಷದ ನಾಯಕ,ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿಗೆ ಬೆಳಕು ನೀಡಲು ಶರಾವತಿ ನದಿಗೆ ಆಣೆಕಟ್ಟೆ ಕಟ್ಟಿದ್ದರಿಂದ ಸಾವಿರಾರು ಜನ ಸಂತ್ರಸ್ತರಾಗಿದ್ದಾರೆ, 130 ಹಳ್ಳಿಗಳು ಮುಳುಗಡೆಯಾಗಿದ್ದವು ಎಂದರು.

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಅರಣ್ಯ ಪ್ರದೇಶದಲ್ಲಿ ವಸತಿ ಕಲ್ಪಿಸಲಾಗಿತ್ತು.ಆದರೆ ಈ ಪ್ರದೇಶವನ್ನು ಅರಣ್ಯ ಪ್ರದೇಶವನ್ನು ಬಿಡುಗಡೆಗೊಳಿಸಿ ಡಿ ನೋಟಿಫಿಕೇಷನ್ ಮಾಡಿಲ್ಲ. ನಮ್ಮ ಕಾಲದಲ್ಲಿ ಈ ಕೆಲಸ ಮಾಡಿದ್ದೆವು. ಆದರೆ ಡಿನೋಟಿಫಿಕೇಷನ್ ಪ್ರಶ್ನಿಸಿ  ಓರ್ವ ವ್ಯಕ್ತಿ  ಕೋರ್ಟಿಗೆ ಹೋಗಿದ್ದ ಕಾರಣ ಡಿ ನೋಟಿಫಿಕೇಷನ್ ಕೋರ್ಟ್ ರದ್ದು ಮಾಡಿತ್ತು.ಆದರೆ ನಂತರ ಬಂದ ಬಿಜೆಪಿ ಸರ್ಕಾರ ಇದನ್ನು ಸರಿ ಮಾಡುವ ಕೆಲಸ ಮಾಡಿಲ್ಲ ಎಂದು ದೂರಿದರು.

ಹೈಕೋರ್ಟ್ ನಲ್ಲಿ ಡಿನೋಟಿಫಿಕೇಷನ್ ರದ್ದಾದ ಕಾರಣ ಮುಳುಗಡೆ ಸಂತ್ರಸ್ತ ರೈತರು ಹೋರಾಟ ಮಾಡುತ್ತಲೇ ಇದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಡಿನೋಟಿಫಿಕೇಷನ್ ಮಾಡಿಲ್ಲ. ಇದರಿಂದ ಸಂತ್ರಸ್ತರು ಅತಂತ್ರರಾಗಿದ್ದಾರೆ ಎಂದರು.

ಮುಳುಗಡೆ ರೈತರು ಅತಂತ್ರರಾದ ಕಾರಣ  ಸಂತ್ರಸ್ತರ ಪರವಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ ಎಂದ ಅವರು, ಬಿಜೆಪಿ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಹೈಕೋರ್ಟ್ ನಲ್ಲಿ ಕೂಡಿ ಮತ್ತು ಸುಡೂರು ಸರ್ವೆ ನಂಬರ್ ಗಳ ಡಿನೋಟಿಫಿಕೇಷನ್ ಮಾತ್ರ ರದ್ದಾಗಿದೆ. ಇಷ್ಟು ದಿನ ಏನೂ ಮಾಡದ ಸಿಎಂ, ಈಗ ಸಮಸ್ಯೆ ಬಗೆಹರಿಸುತ್ತೇವೆ ಎನ್ನುತ್ತಿದ್ದಾರೆ. ಸಿಎಂ ಮೂರುವರೆ ವರ್ಷದಿಂದ ಏನು ಮಾಡಿದರು ಎಂದು ಪ್ರಶ್ನಿಸಿದರು.

ಗಡಿ ವಿವಾದ ಇತ್ಯರ್ಥವಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಹಾಜನ್ ವರದಿಯೇ ಅಂತಿಮ. ಮಹಾರಾಷ್ಟ್ರದವರು ರಾಜಕಾರಣಕ್ಕಾಗಿ ಕಾಲು ಕೆರೆಯುತ್ತಲೇ ಇದ್ದಾರೆ. ಮಹಾರಾಷ್ಟ್ರದವರು ಯಾವಾಗಲೂ ಪುಂಡಾಟ ನಡೆಸುತಿದ್ದಾರೆ. ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರದಲ್ಲೂ ಬಿಜೆಪಿ ಸರ್ಕಾರವೇ ಇದೆ. ಅವರ ಬಳಿ‌ ಸಿಎಂ ಮಾತನಾಡಲಿ ಎಂದು ಆಗ್ರಹಿಸಿದರು.

ಬಸ್ ಗೆ ಮಸಿ ಬಳಿಯುವುದು, ಕಲ್ಲು ಹೊಡೆಯುವುದು ಮಾಡುತ್ತಿದ್ದಾರೆ. ಅವರಿಗೆ ಮಾತ್ರ ಕಲ್ಲು ಹೊಡೆಯಲು ಬರುತ್ತದೆಯೇ ಎಂದು ಯೋಚಿಸಬೇಕಿದೆ ಎಂದರು. ರೌಡಿಗಳು ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯೇ ರೌಡಿಗಳ ಪಕ್ಷ ಎಂದು‌ ಟೀಕಿಸಿದರು.

Similar News