ಒಕ್ಕಲಿಗ ಸಮುದಾಯದಿಂದ ಮೀಸಲಾತಿ ಹೆಚ್ಚಳಕ್ಕೆ ಗಡುವು: ಸಿ.ಎಂ ಬೊಮ್ಮಾಯಿ ಪ್ರತಿಕ್ರಿಯೆ ಏನು?

Update: 2022-11-28 14:13 GMT

ಮೈಸೂರು,ನ.28: ಒಕ್ಕಲಿಗ ಸಮುದಾಯ ಮೀಸಲಾತಿ ಹೆಚ್ಚಳಕ್ಕೆ ಗಡುವು ನೀಡಿರುವುದು ನನ್ನ ಗಮನಕ್ಕೆ ಬಂದಿದೆ. ಎಲ್ಲಾ ಸಮುದಾಯಗಳ ನಿರೀಕ್ಷೆಗಳೂ ಹೆಚ್ಚಾಗಿದೆ. ಸಂವಿಧಾನದ ಚೌಕಟ್ಟಿನೊಳಗೆ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸೋಮವಾರ ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಮೀಸಲಾತಿ ಹೆಚ್ಚಿಸಬೇಕಾದರೆ ಸಂವಿಧಾನ ಹಾಗೂ ಕಾನೂನು ಚೌಕಟ್ಟಿನಲ್ಲಿ ಕ್ರಮ ವಹಿಸಬೇಕು. ಎಲ್ಲ ವರ್ಗದ ಹಿತಚಿಂತಕನಾಗಿ ಕೆಲಸ ಮಾಡುತ್ತಿದ್ದೇನೆ.  ಹಿಂದುಳಿದ ವರ್ಗಗಳ ಆಯೋಗದ ವರದಿ ಇನ್ನೂ ನನಗೆ ಸಿಕ್ಕಿಲ್ಲ,  ಅದರ ವರದಿ ಸಿಕ್ಕ ನಂತರ ಒಕ್ಕಲಿಗರ ಮನವಿ ಕುರಿತು ಪರಿಶೀಲಿಸಲಾಗುವುದು ಎಂದರು.

ಕರ್ನಾಟಕ- ಮಹಾರಾಷ್ಟ್ರ ಗಡಿ ವ್ಯಾಜ್ಯ ಪ್ರಕರಣವು ಇದೇ ನ.30 ರಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದ್ದು, ರಾಜ್ಯ ಗಡಿ ಮತ್ತು ನದಿ ರಕ್ಷಣಾ ಆಯೋಗದ ಅಧ್ಯಕ್ಷ ನ್ಯಾ.ಶಿವರಾಜ ವಿ. ಪಾಟೀಲ ನೇತೃತ್ವದಲ್ಲಿ ಸಭೆ ನಡೆದಿದೆ. ಕೋರ್ಟ್ ನಲ್ಲಿ ನಮ್ಮ ವಾದ, ತಂತ್ರಗಳು ಮತ್ತು ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ದೆಹಲಿ ಪ್ರವಾಸ ಕೈಗೊಂಡಿದ್ದು, ನಾಳೆ ನ.29ರಂದು ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರನ್ನು ಭೇಟಿ ಮಾಡುತ್ತಿದ್ದೇನೆ. ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ಇರುವುದರಿಂದ ಬಹಿರಂಗ ಚರ್ಚೆ ಮಾಡಿದರೆ ಪರಿಣಾಮಗಳು ಉಂಟಾಗುತ್ತವೆ. ಹೀಗಾಗಿ ಆ ಬಗ್ಗೆ ಏನೂ ಹೇಳಲಾರೆ ಎಂದರು.

Similar News