ದೆಹಲಿಯತ್ತ ಸಿಎಂ ಬೊಮ್ಮಾಯಿ ಪ್ರಯಾಣ; ಗಡಿ ವಿವಾದ, ಸಂಪುಟ ವಿಸ್ತರಣೆ ಕುರಿತು ಚರ್ಚೆ ಸಾಧ್ಯತೆ

Update: 2022-11-28 15:26 GMT

ಬೆಂಗಳೂರು, ನ. 28: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ಆರಂಭವಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ(ನ.28) ಹೊಸದಿಲ್ಲಿಗೆ ತೆರಳಿದ್ದು, ಕೇಂದ್ರ ಸಚಿವರು ಹಾಗೂ ರಾಜ್ಯದ ವಕೀಲರ ತಂಡದೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ.

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಇದೇ ವಾರದಲ್ಲಿ ಸರ್ವ ಪಕ್ಷಗಳ ಸಭೆ ಕರೆದಿರುವ ಮುಖ್ಯಮಂತ್ರಿ, ಅದಕ್ಕೂ ಮುನ್ನ ರಾಜ್ಯದ ವಕೀಲರ ತಂಡದೊಂದಿಗೆ ಚರ್ಚಿಸಿ, ಅಗತ್ಯ ಮಾಹಿತಿಗಳನ್ನು ಕಲೆ ಹಾಕಲಿದ್ದಾರೆ. ಅಲ್ಲದೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಜೊತೆಯೂ ಚರ್ಚಿಸಲಿದ್ದಾರೆ ಎನ್ನಲಾಗಿದೆ. 

ಮಹಾರಾಷ್ಟ್ರ ಹಾಗೂ ಕರ್ನಾಟಕ ಎರಡು ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಗಡಿ ವಿವಾದದ ಕುರಿತು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೀಡಿರುವ ಹೇಳಿಕೆ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಜೆ.ಪಿ.ನಡ್ಡಾ ಜೊತೆ ಚರ್ಚಿಸಲು ಬಯಸಿದ್ದು, ಇದಕ್ಕಾಗಿ ಅವರ ಭೇಟಿಗೆ ಕಾಲಾವಕಾಶವನ್ನು ಕೋರಿದ್ದಾರೆ ಎಂದು ತಿಳಿದು ಬಂದಿದೆ.

ವಿಧಾನಸಭಾ ಚುನಾವಣೆಗೆ ಇನ್ನೂ ಕೇವಲ ಐದು ತಿಂಗಳು ಮಾತ್ರ ಬಾಕಿ ಇದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸುಮಾರು 10ಕ್ಕೂ ಹೆಚ್ಚು ಬಾರಿ ಹೊಸದಿಲ್ಲಿಗೆ ತೆರಳಿ, ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ ಬಂದಿದ್ದಾರೆ. ಆದರೂ, ಸಂಪುಟ ವಿಸ್ತರಣೆಗೆ ಮಾತ್ರ ಅವಕಾಶ ಸಿಕ್ಕಿಲ್ಲ.

ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ತಲ್ಲೀನವಾಗಿರುವ ಬಿಜೆಪಿ ವರಿಷ್ಠರು, ರಾಜ್ಯ ರಾಜಕೀಯದ ವಿದ್ಯಾಮಾನಗಳ ಬಗ್ಗೆ ಸದ್ಯಕ್ಕೆ ಚರ್ಚೆ ನಡೆಸಲು ಉತ್ಸುಕರಾದಂತೆ ಕಂಡು ಬರುತ್ತಿಲ್ಲ. ಕಳೆದ ಒಂದೂವರೆ ವರ್ಷದಿಂದ ಸಚಿವ ಸಂಪುಟ ಸೇರ್ಪಡೆಗೆ ಕಾತುರದಿಂದ ಕಾಯುತ್ತಿರುವ ಆಕಾಂಕ್ಷಿಗಳು ಎಂದಿನಂತೆ ಆಸೆಗಣ್ಣಿನಿಂದ ಮತ್ತೆ ವರಿಷ್ಠರತ್ತ ನೋಡುವಂತಾಗಿದೆ.

ಜೆ.ಪಿ.ನಡ್ಡಾ ಭೇಟಿಗೆ ಅವಕಾಶ ಸಿಕ್ಕಿದ್ದಲ್ಲಿ, ಸಚಿವ ಸಂಪುಟ ವಿಸ್ತರಣೆ ಪದೇ ಪದೇ ಮುಂದೂಡುಲ್ಪಡುತ್ತಿರುವುದರಿಂದ, ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಮನೆ ಮಾಡುತ್ತಿರುವ ಅಸಮಾಧಾನದ ಕುರಿತು ವರಿಷ್ಠರ ಗಮನ ಸೆಳೆಯಲು ಬಯಸಿದ್ದಾರೆ. ಸಚಿವ ಸಂಪುಟಕ್ಕೆ ಪುನಃ ಸೇರ್ಪಡೆಗೊಳ್ಳಲು ಒಂದೆಡೆ ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ ಪ್ರಯತ್ನ ನಡೆಸುತ್ತಿದ್ದಾರೆ.

ಜೊತೆಗೆ, ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಂ.ಪಿ.ರೇಣುಕಾಚಾರ್ಯ, ಎಸ್.ಎ.ರಾಮದಾಸ್, ಕೆ.ಪೂರ್ಣೀಮಾ ಶ್ರೀನಿವಾಸ, ತಿಪ್ಪಾರೆಡ್ಡಿ, ರಾಜೂಗೌಡ, ಪಿ.ರಾಜೀವ್, ಅರವಿಂದ ಲಿಂಬಾವಳಿ ಸೇರಿದಂತೆ ಹಲವು ಶಾಸಕರು ಸಚಿವ ಸಂಪುಟ ಸೇರ್ಪಡೆಯಾಗಲು ಉತ್ಸುಕರಾಗಿದ್ದಾರೆ.

ಹೊಸದಿಲ್ಲಿ ಪ್ರವಾಸದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟ ವಿಸ್ತರಣೆ ಮಾಡಲು ಅನುಮತಿ ಪಡೆಯುತ್ತಾರೋ, ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

Similar News