ವಿಧಾನಸಭಾ ಚುನಾವಣೆಗೆ 20 ಕ್ಷೇತ್ರಗಳಲ್ಲಿ ಸಿಪಿಐ ಸ್ಪರ್ಧೆ: ಸುಂದರೇಶ್

Update: 2022-11-28 14:59 GMT

ಹಾಸನ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ರಾಜ್ಯದ ಸುಮಾರು 20 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಾಗುವುದು. 2023ರ ಫೆಬ್ರವರಿ 22ಕ್ಕೆ ವಸತಿ ಮತ್ತು ನಿವೇಶನಕ್ಕೆ ಆಗ್ರಹಿಸಿ ವಿಧಾನಸಭಾ ಚಲೋ ಹೋರಾಟವನ್ನು ಹಮ್ಮಿಕೊಂಡಿರುವುದಾಗಿ ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸುಂದರೇಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯಮಂಡಳಿ ಸಭೆಯ ತೀರ್ಮಾನದಂತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಸುಮಾರು 20 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರ ಯಾವುದೇ ಪಕ್ಷಕ್ಕೆ ಬಹುಮತ ನೀಡದೆ, ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೋತ್ತರ ಮೈತ್ರಿ ಸರ್ಕಾರ ರಚನೆಯಾಗಿದ್ದು, ನಂತರ ಬಿ.ಜೆ.ಪಿ.ಯ ಕುತಂತ್ರ ನೀತಿಯಿಂದ ಸರ್ಕಾರ ರಚನೆಯಾಗಿತ್ತು.

ಸಿ.ಪಿ.ಐ. ಪಕ್ಷವು ಮುಂಬರುವ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ತೀರ್ಮಾನ ರಾಜ್ಯ ಮಂಡಳಿ ಸಭೆಯಲ್ಲಿ ಕೈಗೊಳ್ಳಲಾಗಿದೆ. ಹಾಗೂ ಇದರ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಸಕಲೇಶಪುರ ಮತ್ತು ಬೇಲೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವು ತನ್ನ ಅಭ್ಯರ್ಥಿಯನ್ನು ನಿಲ್ಲಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದರು.

2023 ಫೆಬ್ರವರಿ, 22ಕ್ಕೆ ವಸತಿ ಮತ್ತು ನಿವೇಶನಕ್ಕೆ ಆಗ್ರಹಿಸಿ ವಿಧಾನಸಭಾ ಚಲೋ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಸುಮಾರು 50 ಲಕ್ಷ ಕುಟುಂಬಗಳು ವಸತಿಹೀನವಾಗಿವೆ. ವಸತಿಯನ್ನು ಕಲ್ಪಿಸಲು ಅಗತ್ಯವಾದ ಭೂಮಿ ಲಭ್ಯತೆಯ ಬಗ್ಗೆ ಸರ್ಕಾರ ದಿವ್ಯ ನಿರ್ಲಕ್ಷ್ಯ ಹೊಂದಿದೆ. ರಾಜ್ಯ ಸರ್ಕಾರವು ಜನರ ವಸತಿಗಾಗಿ ಭೂಮಿಯನ್ನು ಕಾಯ್ದಿರಿಸುವ ಬದಲಾಗಿ ಸುಮಾರು 17 ಲಕ್ಷ ಎಕ್ರೆ ಸರ್ಕಾರೀ ಜಮೀನನ್ನು ಟ್ರಸ್ಟ್ ಇನ್ನಿತರ ಸಂಸ್ಥೆಗಳಿಗೆ ಪರಭಾರೆ ಮಾಡಲು ಹೊರಟಿದೆ.

ಇದರೊಂದಿಗೆ ರಾಜ್ಯಕ್ಕೆ ಬಂಡವಾಳವನ್ನು ಆಕರ್ಷಿಸುವ ಉದ್ದೇಶದಿಂದ ಸಾವಿರಾರು ಎಕ್ರೆ ಭೂಮಿಯನ್ನು ಬಂಡವಾಳಶಾಹೀ, ಕಾರ್ಪೊರೇಟ್ ಕೈಗಾರಿಕೋದ್ಯಮಿಗಳಿಗೆ ನೀಡಲು ಮುಂದಾಗಿದೆ. ಸರ್ಕಾರದ ಈ ನೀತಿಯನ್ನು ಸಿ.ಪಿ.ಐ. ತೀವ್ರವಾಗಿ ವಿರೋಧಿಸುತ್ತದೆ ಹಾಗೂ ಪ್ರಜೆಗಳ ವಸತಿಗಾಗಿ ಅಗತ್ಯ ಭೂಮಿಯನ್ನು ಕಾಯ್ದಿರಿಸಿ, ನಿವೇಶನ ರಹಿತರಿಗೆ ನಿವೇಶನವನ್ನು ಹಂಚಲು ಒತ್ತಾಯಿಸಿ ಸಿ.ಪಿ.ಐ. ರಾಜ್ಯಾದ್ಯಂತ ಹೋರಾಟವನ್ನು ಆರಂಭಿಸುತ್ತದೆ ಎಂದು ಎಚ್ಚರಿಸಿದರು.

ತಪ್ಪಾದ ಆರ್ಥಿಕ ನೀತಿಯನ್ನು ಬಿ.ಜೆ.ಪಿ.ಯು ಕೇಂದ್ರ ಹಾಗೂ ರಾಜ್ಯದಲ್ಲಿ ಅನುಸರಿಸುತ್ತಿದ್ದು, ಇದರಿಂದ ದೇಶದ ನೆಲ, ಜಲ, ಸಾರಿಗೆ, ಸಾರ್ವಜನಿಕ ಉದ್ದಿಮೆಗಳು ಅದಾನಿ-ಅಂಬಾನಿಯಂತಹ ಕೆಲವೇ ಕೆಲವು ಬಂಡವಾಳ ಶಾಹಿಗಳ ಕೈಯಲ್ಲಿ ಕೇಂದ್ರೀಕೃತವಾಗುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಇಂತಹ ಜನವಿರೋಧಿ ಆರ್ಥಿಕ ನೀತಿಯನ್ನು ತಡೆಯುವುದು ಇಂದಿನ ತುರ್ತು ಅಗತ್ಯವಾಗಿದೆ. ಆದುದರಿಂದ ಬಲಪಂಥೀಯ, ಫ್ಯಾಸಿಸ್ಟ್ ಬಿ.ಜೆ.ಪಿ.ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸದೇ ಇದ್ದರೆ ದೇಶಕ್ಕೆ ಭವಿಷ್ಯವಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಾತ್ಯತೀತ, ಪ್ರಜಾಪ್ರಭುತ್ವವಾದಿ ಮತ್ತು ಎಡ ಪಕ್ಷಗಳು ಒಟ್ಟಿಗೆ ಸೇರಿ ರಾಜಕೀಯ ರಂಗವನ್ನು ನಿರ್ಮಿಸಿ ಬಿ.ಜೆ.ಪಿ.ಯನ್ನು ಸೋಲಿಸಲು ಸಿ.ಪಿ.ಐ. ಕರೆ ನೀಡುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಸಹ ಕಾರ್ಯದರ್ಶಿ ಸಿ. ಧರ್ಮರಾಜು ಹಾಗೂ ಸದಸ್ಯೆ ಮಂಜೂಳಾ ಇತರರು ಉಪಸ್ಥಿತರಿದ್ದರು.

Similar News