ಸಮರ್ಪಕವಾಗಿ ‘ಪೊಕ್ಸೊ’ ಕಾಯಿದೆ ಅನುಷ್ಠಾನವಾಗಿಲ್ಲ: ಪರಿಶೀಲನಾ ಸಭೆಯಲ್ಲಿ ಬಹಿರಂಗ

ಶಾಲೆಗಳಲ್ಲಿ ‘ಪೊಕ್ಸೊ' ಕಾಯ್ದೆ ಅನುಷ್ಠಾನಕ್ಕೆ ಸರಕಾರದ ಸುತ್ತೋಲೆ

Update: 2022-11-28 16:04 GMT

ಬೆಂಗಳೂರು ನ.28: ರಾಜ್ಯದಲ್ಲಿ ಸಮರ್ಪಕವಾಗಿ ‘ಪೊಕ್ಸೊ’ ಕಾಯಿದೆ ಅನುಷ್ಟಾನವಾಗಿಲ್ಲ. ಹಾಗಾಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಕ್ಸೊ ಕಾಯಿದೆಯನ್ನು ಅನುಷ್ಟಾನ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿದೆ. 

ಹತ್ತು ವರ್ಷಗಳಿಂದ ಸಮರ್ಪಕವಾಗಿ ಕಾಯಿದೆಯು ಅನುಷ್ಠಾನವಾಗಿದೆಯೇ ಎಂಬುದರ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯು ನಡೆದಿದ್ದು, ಸಭೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಮತ್ತಷ್ಟು ಕಟ್ಟುನಿಟ್ಟಿನ ಕ್ರಮವನ್ನು ಜರುಗಿಸಬೇಕು ಎಂದು ನಿರ್ಧರಿಸಲಾಗಿದೆ. ಹಾಗೆಯೇ ರಾಜ್ಯದ ಪ್ರತಿ ಮಗುವಿಗೂ ಎಲ್ಲ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಸೇರಿ ಆರೋಗ್ಯ, ಭದ್ರತೆಯನ್ನು ಒದುಗಿಸಲು ಶಾಲೆಗಳಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿಗಳನ್ನು ಅನುಸರಿಸುವಂತೆ ಆದೇಶಿಸಿದೆ. 

ಪ್ರತಿ ಶಾಲೆಗಳಲ್ಲಿ ಮಕ್ಕಳ ಸುರಕ್ಷಾ ಸಮಿತಿಯನ್ನು ರಚಿಸಬೇಕು. ಈ ಸಮಿತಿಯಲ್ಲಿ ಶಾಲಾ ಮುಖ್ಯಸ್ಥರನ್ನು ಅಧ್ಯಕ್ಷರಾಗಿರಬೇಕು. ಇಬ್ಬರು ಶಿಕ್ಷಕರು, ಮೂವರು ಪೋಷಕರು, ಎಸ್ಡಿಎಂಸಿ ಅಧ್ಯಕ್ಷರು, ಇಬ್ಬರು ಮಕ್ಕಳು ಹಾಗೂ ಒಬ್ಬರು ಆರೋಗ್ಯ ಇಲಾಖೆಯ ಅಧಿಕಾರಿ ಸಮಿತಿಯ ಸದಸ್ಯರಾಗಿರಬೇಕು ಎಂದು ತಿಳಿಸಿದೆ. 

ಶಾಲೆಗಳಲ್ಲಿ ದೂರು ಮತ್ತು ಸಲಹೆ ಪೆಟ್ಟಿಗೆಯನ್ನು ಮಕ್ಕಳಿಗೆ ಸಿಗುವ ಹಾಗೆ ಅಳವಡಿಸಬೇಕು. ಅದನ್ನು ಬೀಗ ಹಾಕಿ, ಕನಿಷ್ಟ ವಾರಕ್ಕೊಮ್ಮೆ ಮಕ್ಕಳ ಸಮಿತಿಯ ಸಮ್ಮುಖದಲ್ಲಿ ತೆರೆಯಬೇಕು. ಅರ್ಜಿಗಳನ್ನು ನಿಯಮಾನುಸಾರ ಇತ್ಯರ್ಥಗೊಳಿಸಲು ಕ್ರಮವಹಿಸುವಂತೆ ತಿಳಿಸಿದೆ. 

ಶಾಲೆಯ ನಿಗಧಿತ ಅವಧಿಯ ಕನಿಷ್ಟ ಅರ್ಧ ಗಂಟೆ ಮೊದಲು ಶಾಲೆಯಲ್ಲಿ ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತು ಸಿಬ್ಬಂದಿ ಹಾಜರಿರಬೇಕು. ನ್ಯಾಯಾಲಯದ ಆದೇಶದಂತೆ ಶಾಲಾ ವಾತಾವರಣದಲ್ಲಿ ಸಂಪೂರ್ಣ ಸುರಕ್ಷತೆಯನ್ನು ಪಾಲಿಸಬೇಕು ಎಂದು ತಿಳಿಸಿದೆ.

Similar News