ಇನ್ನೆರಡು ದಿನಗಳಲ್ಲಿ ಕಬ್ಬಿಗೆ ದರ ನಿಗದಿ: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಭರವಸೆ ನೀಡಿದ ಬೊಮ್ಮಾಯಿ

Update: 2022-11-28 17:32 GMT

ಮೈಸೂರು,ನ.28: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಿ  ರೈತರ ಮನವಿಯನ್ನು ಸ್ವೀಕರಿಸಿ ಇನ್ನೆರಡು ದಿನಗಳಲ್ಲಿ ಕಬ್ಬಿಗೆ ಬೆಲೆ ನಿಗದಿಗೊಳಿಸಲಾಗುವುದು ಎಂಬ ಭರವಸೆ ನೀಡಿದರು.

ಮೈಸೂರು ಜಿಲ್ಲೆ ನಂಜನಗೂಡು ನಗರದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗೆ ಸೋಮವಾರ ಆಗಮಿಸಿದ ಮುಖ್ಯಮಂತ್ರಿಗಳು ಮೊದಲಿಗೆ ಮೈಸೂರು-ನಂಜನಗೂಡು ಬೈಪಾಸ್ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದರು. ಇದರಿಂದ ಅನತಿ ದೂರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಬಳಿಗೆ ತೆರಳಿ ಸಮಸ್ಯೆ ಆಲಿಸಿದರು.

ಇದೇ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರೈತರು ಕಬ್ಬು ಬೆಳೆದು ಸರಿಯಾದ ಬೆಲೆ ಸಿಗದೆ ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಎಸ್.ಎ.ಪಿ. ದರವನ್ನು ಘೋಷಣೆ ಮಾಡುವುದರ ಜೊತೆಗೆ ಎಫ್.ಆರ್.ಪಿ ನಿಗದಿಗೆ 8.5 ಇಳುವರಿಯನ್ನು ಮಾನದಂಡ ಮಾಡಿಕೊಳ್ಳಬೆಕು ಎಂದು ಒತ್ತಾಯಿಸಿದರು.

ಒಂದು ಲೀಟರ್ ಹಾಲಿಗೆ 40 ರೂ. ನಿಗದಿಪಡಿಸಬೇಕು. ಭತ್ತಕ್ಕೆ ಪ್ರತಿ ಕ್ವಿಂಟಾಲ್ ಗೆ  500 ರೂ. ಸಹಾಯಧನವನ್ನು ರಾಜ್ಯದ ಎಲ್ಲಾ ರೈತರಿಗು ವಿಸ್ತರಿಸಬೇಕು, ಭಾಗ್ಯಜ್ಯೋತಿ, ಕುಟೀರ ಜ್ತೋತಿಗಳ ವಿದ್ಯುತ್ ಬಾಕಿ ವಸೂಲಿ ಮಾಡಲು ಬಲವಂತವಾಗಿ ಮುಂದಾಗಿರುವುದನ್ನು ಕೈಬಿಡಬೇಕು, ಕರ ನಿರಾಕರಣೆ ಸಂದರ್ಭದಲ್ಲಿ ಉಳಿಸಿಕೊಂಡಿರುವ ಗೃಹ ವಿದ್ಯುತ್ ಬಾಕಿಯನ್ನು ಸಂಪೂರ್ಣ ಮನ್ನಾ ಮಾಡಬೇಕು, ಕಾಫಿ ಬೆಳೆಗಾರರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವುದನ್ನು ಕೈಬಿಟ್ಟು ಏಕರೂಪದ ವಿದ್ಯುತ್ ಸರಬರಾಜು ಮಾಡಬೇಕು, ಕೇಂದ್ರ ಸರ್ಕಾರ ವಿದ್ಯುತ್ ಕಾಯಿದೆಗೆ ತಿದ್ದುಪಡಿ ತಂದು ವಿದ್ಯುತ್ ಉತ್ಪಾದನೆ ಪ್ರಸರಣೆ ಮತ್ತು ಸರಬರಾಜನ್ನು ಖಾಸಗೀಕರಣ ಮಾಡಲು ಮಯಂದಾಗಿರುವುದನ್ನು ರಾಜ್ಯ ಸರ್ಕಾರ ವಿರೋಧಿಸಬೇಕು ಎಂದು ಆಗ್ರಹಿಸಿದರು.

ಬಗರ್ ಹುಕುಂ ದರಖಾಸ್ತು ಸಮಿತಿ ರಚಿಸಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ವಿತರಿಸಬೇಕು, ಚಾಮರಾಜನಗರ, ಜಾಗೇರಿಯ ಸುತ್ತ ಮುತ್ತ ಇರುವ 4500 ಸಾವಿರ ಎಕರೆ ಜಮೀನನ್ನು ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು, ರಾಜ್ಯಾದ್ಯಂತ ಈ ರೀತಿ ಇರುವ ಸಮಸ್ಯೆಯನ್ನು ಬಗೆಹರಿಸಬೇಕು ಮತ್ತು ಅರಣ್ಯ ಇಲಾಖೆಯವರ ಕಿರುಕುಳವನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.

ಸಮಸ್ಯೆ ಆಲಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಬ್ಬಿಗೆ ದರ ನಿಗದಿ ಮಾಡಲು ಈಗಾಗಲೇ ಸಕ್ಕರೆ ಕಂಪನಿ ಮಾಲೀಕರೊಂದಿಗೆ ನಾಲ್ಕು ಬಾರಿ ಮಾತುಕತೆ ನಡೆಸಲಾಗಿದೆ. ಇನ್ನೆರಡು ದಿನ ಅವರಿಗೆ ಕಾಲಾವಕಾಶ ನೀಡುತ್ತೇನೆ. ಇಲ್ಲದಿದ್ದರೆ ಸರ್ಕಾರದ ವತಿಯಿಂದಲೇ ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಹಾಲು ದರ ನಿಗದಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ಪರಿಶೀಲನೆ ಮಾಡಲಾಗುವುದು. ಭತ್ತದ ಖರೀದಿ ಕೇಂದ್ರ ರೈಸ್ ಮಿಲ್ ಗಳಿಂದ ಬೇಡ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಹಾಗಾಗಿ ಅದನ್ನು ಸ್ಥಗಿತಗೊಳಿಸಲಾಗಿತ್ತು. ರೈತರು ರೈಸ್ ಮಿಲ್ ಗಳಿಂದಲೇ ಖರೀದಿ ಕೇಂದ್ರ ತೆರೆಯಬೇಕು ಎಂಬ ಒತ್ತಾಯ ಇರುವುದರಿಂದ ರಾಜ್ಯಾದ್ಯಂತ ಎಲ್ಲಾ ರೈಸ್ ಮಿಲ್ ಕಾರ್ಖಾನೆಗಳಿಂದಲೇ ಖರೀದಿ ಮಾಡಲು ನಿನ್ನೆಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಈ ಹಿಂದಿನ ವಿದ್ಯುತ್ ಬಾಕಿ ವಸೂಲಿ ಬೇಡ ಎಂಬ ಒತ್ತಾಯ ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಬಾಕಿ ಕಟ್ಟಿಕೊಂಡು ಹೋಗುತ್ತೇವೆ ಎಂಬದನ್ನು ನನ್ನ ಗಮನಕ್ಕೆ ತಂದಿದ್ದೀರಿ. ಇದರ ಬಗ್ಗೆ ಹಳೆಯ ಬಾಕಿಯನ್ನು ಮನ್ನಾ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ಚಾಮರಾಜನಗರ ಜಿಲ್ಲೆಯಲ್ಲಿ ಜಾಗರಿ ಹೋರಾಟಕ್ಕೆ ಸಂಬಂಧಿಸಿದಂತೆ ಮಾಹಿತಿ ತರಿಸಿಕೊಂಡು ಸಮಸ್ಯೆ ಬಗೆಹರಿಸುವ ಕ್ರಮ ಕೈಗೊಳ್ಳುತ್ತೇನೆ. ಜೊತೆಗೆ ನಿಮ್ಮ ಇತರ ಬೇಡಿಕೆಗಳನ್ನು ಹಂತ ಹಂತವಾಗಿ ಬಗೆರಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರುಗಳಾದ ಹೊಸಕೋಟೆ ಬಸವರಾಜು, ಪ್ರಭುಸ್ವಾಮಿ, ಶಿರಮಳ್ಳಿ ಸಿದ್ದಪ್ಪ, ಹೆಜ್ಜಿಗೆ ಪ್ರಕಾಶ್, ಮಂಡಕಳ್ಳಿ ಮಹೇಶ್, ಪಿ.ಮರಂಕಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

Similar News