ಹೊಗೆಯಾಡುತ್ತಿರುವ BJPvsBJP ಕಿತ್ತಾಟ ಶೀಘ್ರದಲ್ಲೇ ಬೆಂಕಿಯಾಗಲಿದೆ: ಕಾಂಗ್ರೆಸ್

''ಬಿಜೆಪಿಯಲ್ಲಿ 'ರೌಡಿ ಮೋರ್ಚಾ' ಎಂಬ ಹೊಸ ಘಟಕ ತೆರೆಯುವ ಲಕ್ಷಣವಿದೆ...''

Update: 2022-11-29 12:03 GMT

ಬೆಂಗಳೂರು, ನ.29: 'ನಮ್ಮ ಸರಕಾರದಲ್ಲಿ ನಮ್ಮದೇ ಕೆಲಸ ಆಗುತ್ತಿಲ್ಲ' ಎಂಬ ವಿಧಾನಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಹೇಳಿಕೆ ಉಲ್ಲೇಖಿಸಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, '' ಬಿಜೆಪಿ  ಸರ್ಕಾರದ ನಿಷ್ಕ್ರಿಯತೆಗೆ ಬಿಜೆಪಿ ನಾಯಕರೇ ಸರ್ಟಿಫಿಕೇಟ್ ನೀಡುತ್ತಿದ್ದಾರೆ, 4 ವರ್ಷದಿಂದ ಕರ್ನಾಟಕದ ಅಭಿವೃದ್ಧಿ ಚಕ್ರ ನಿಂತಿದ್ದಷ್ಟೇ ಅಲ್ಲ, ಹಿಂದೆ ಚಲಿಸಿದೆ'' ಎಂದು ಕಿಡಿಕಾರಿದೆ. 

ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ , ''ನಿಮ್ಮ ಧಮ್ಮು ತಾಕತ್ತಿಗೆ ನಿಮ್ಮವರ ಸರ್ಟಿಫಿಕೇಟ್ ಸಾಕಲ್ಲವೇ? ಹೊಗೆಯಾಡುತ್ತಿರುವ #BJPvsBJP ಕಿತ್ತಾಟ ಶೀಘ್ರದಲ್ಲೇ ಬೆಂಕಿಯಾಗಲಿದೆ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕುಟುಕಿದೆ. 

''ಗಡಿಪಾರಾಗಿದ್ದ ಕ್ರಿಮಿನಲ್‌ನನ್ನು ಪಕ್ಷದ ಅಧ್ಯಕ್ಷನನ್ನಾಗಿ ಮಾಡಿದ್ದ ಬಿಜೆಪಿಗೆ ರೌಡಿಗಳು, ಕ್ರಿಮಿನಲ್‌ಗಳೇ ಆದರ್ಶ ವ್ಯಕ್ತಿಗಳು! ಪೊಲೀಸರಿಂದ ಇಂತಹ ಆತಿಥ್ಯ ಪಡೆದ ಈ ವ್ಯಕ್ತಿಗೆ ರಾಜಾತಿಥ್ಯ ನೀಡುತ್ತಿದೆ ಬಿಜೆಪಿ. ಪೊಲೀಸರೆದುರು ತಲೆ ತಗ್ಗಿಸಿ ನಿಲ್ಲುವವನಿಗೆ ಅದೇ ಪೊಲೀಸರಿಂದ ಸೆಲ್ಯೂಟ್ ಹೊಡೆಸಲು ಹವಣಿಸುತ್ತಿದೆ ಬಿಜೆಪಿ'' ಎಂದು ಕಾಂಗ್ರೆಸ್ ಆರೋಪಿಸಿದೆ.  

''40% ಕಮಿಷನ್ ವಸೂಲಿ ಸಾಲದೆ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಹಫ್ತಾ ವಸೂಲಿಗೂ ಬಿಜೆಪಿ ತಯಾರಿ ನಡೆಸಿರುವಂತಿದೆ. ಬಿಜೆಪಿಯಲ್ಲಿ "ರೌಡಿ ಮೋರ್ಚಾ" ಎಂಬ ಹೊಸ ಘಟಕ ತೆರೆಯುವ ಲಕ್ಷಣವಿದೆ. ಸೋಲುವ ಭಯದಲ್ಲಿರುವ ಬಿಜೆಪಿ ರೌಡಿಗಳನ್ನು ಬಳಸಿ ಚುನಾವಣೆಗೆ ಸಿದ್ಧತೆ ನಡೆಸಿದೆಯೇ? ಬೊಮ್ಮಾಯಿ ಅವರೇ? ಇದೇನಾ ಬಿಜೆಪಿಯ ಸಂಸ್ಕೃತಿ, ಸಂಸ್ಕಾರ?'' ಎಂದು ಕಾಂಗ್ರೆಸ್ ಕಿಡಿಕಾರಿದೆ. 

Similar News