ಮೈಸೂರು ಜಿಲ್ಲೆಗೆ ಈಗಲೇ ಹೊಸ ಇವಿಎಂ ಮಿಷನ್ ಏಕೆ?: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪ್ರಶ್ನೆ

Update: 2022-11-29 14:55 GMT

ಮೈಸೂರು, ನ.29:  'ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಬಹಳಷ್ಟು ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದರಿಂದ ಹೊಸ ಮತ ಯಂತ್ರಗಳ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ' ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ. 

ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ''ಮೈಸೂರು ಜಿಲ್ಲೆಗೆ ಹೊಸದಾಗಿ 5,635 ಬ್ಯಾಲೆಟ್ ಯೂನಿಟ್ಸ್ ಮತ್ತು 3,918ಕಂಟ್ರೋಲ್ ಯೂನಿಟ್ಸ್ ತರಲಾಗಿದೆ. ಇದೊಂದು ಗಂಭೀರ ವಿಷಯವಾಗಿದೆ, ಇವುಗಳ ನಿರ್ವಹಣೆಯನ್ನು ಖಾಸಗಿ ಎಂಜಿನಿಯರ್‌ಗಳ ಸಂಸ್ಥೆಗೆ ನೀಡಿದ್ದಾರೆ. ಆದ್ದರಿಂದ  ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಪ್ರತಿಯೊಂದು ಮತಯಂತ್ರದ ಡೆಮೋ ಮಾಡಬೇಕು‌. ಆ ಮೂಲಕ ಮತಯಂತ್ರಗಳ ಬಗ್ಗೆ ವ್ಯಕ್ತವಾಗಿರುವ ಅನುಮಾನವನ್ನು ದೂರ ಮಾಡಬೇಕು'' ಎಂದು ಆಗ್ರಹಿಸಿದರು.

''ರಾಜ್ಯದಲ್ಲಿರುವುದು ರೌಡಿಸಂ ನಡೆಸುತ್ತಿರುವ  ಬಿಜೆಪಿ ಸರ್ಕಾರ'' 

''ಪೊಲೀಸರ ಕಣ್ಣಿಗೆ ಬೀಳದೆ ತಲೆಮರೆಸಿಕೊಂಡಿರುವ ರೌಡಿ ಶೀಟರ್ ಸೈಲೆಂಟ್ ಸುನೀಲ್ ಬಿಜೆಪಿ ಸಚಿವರು, ಶಾಸಕರೊಂದಿಗೆ ವೇದಿಕೆ ಹಂಚಿಕೊಳ್ಳತ್ತಾನೆ ಎಂದರೆ ಹೇಗೆ? ರಾಜ್ಯದಲ್ಲಿರುವುದು ರೌಡೀಸಂ ನಡೆಸುತ್ತಿರುವ  ಬಿಜೆಪಿ ಸರ್ಕಾರ'' ಎಂದು ಆರೋಪಿಸಿದರು.

''ಬೆಂಗಳೂರಿನ ಡಿಸಿಪಿ ಶರವಣ ಅವರು ಇತ್ತೀಚೆಗೆ ರೌಡಿ ಶೀಟರ್ ಗಳ ನಾಪತ್ತೆಯಾದವರ  ಪಟ್ಟಿ ಬಿಡುಗಡೆ ಮಾಡಿ ಹಲವಾರು ರೌಡಿಗಳು ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಸರ್ಕಾರಕ್ಕೆ ನೀಡಿದ್ದಾರೆ. ಅದರಲ್ಲಿ ಮೊದಲಿಗನಾಗಿ ರೌಡಿ ಶೀಟರ್ ಸೈಲೆಂಟ್  ಸುನೀಲನ ಹೆಸರು ಕೇಳಿಬಂದಿದೆ. ಅಂತಹ ವ್ಯಕ್ತಿ ಬಿಜೆಪಿಯವರಿಗೆ ಸಿಗುತ್ತಾನೆ. ಪೊಲೀಸರಿಗೆ ಸಿಗುತ್ತಿಲ್ಲ ಎಂದರೆ ಏನರ್ಥ,  ಇಂತಹ ಕ್ರಿಮಿನಲ್ ಉಳ್ಳ ಕೊಲೆಗಡುಕ ರೌಡಿಯನ್ನು ಬಿಜೆಪಿ ಕಾರ್ಯಕ್ರಮದ ವೇದಿಕೆಯಲ್ಲಿ ಕೂರಿಸಿಕೊಂಡು  ಇವನ ಬಗ್ಗೆ ಸಚಿವ ಅಶ್ವತ್ಥ ನಾರಾಯಣ ಸಮರ್ಥಿಸಿಕೊಳ್ಳುತ್ತಾರೆ ಎಂದರೆ ಬಿಜೆಪಿಯವರ ಮನಸ್ಥಿತಿ ಎಷ್ಟರ ಮಟ್ಟಿಗೆ ಇದೆ ಎಂಬುದು ಇದರಲ್ಲೇ ತೋರಿಸುತ್ತದೆ'' ಎಂದು ಕಿಡಿಕಾರಿದರು.

''ಬಿಜೆಪಿಯಲ್ಲಿ 47 ಮಂದಿ ಕ್ರಿಮಿನಲ್ ಹಿನ್ನೆಲೆಯುಳ್ಳ ಶಾಸಕರಿದ್ದಾರೆ. 3 ಮಂದಿ ಸಂಸದರಿದ್ದಾರೆ. 16  ಮಂದಿ ಸಚಿವರು, ಶಾಸಕರು ಲೈಂಗಿಕ ಸಿಡಿಗೆ ಸಂಬಂಧ  ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ. ಇವರ ಜೊತೆ ಇಬ್ಬರು ಸಂಸದರೂ ಇದ್ದಾರೆ. ಡಿ.ವಿ.ಸದಾನಂದಗೌಡ ಮತ್ತು ಪ್ರತಾಪ ಸಿಂಹ ಅವರು ತಡೆಯಾಜ್ಞೆ ಪಡೆದಿದ್ದು, ನನ್ನ ವಿರುದ್ಧ ಸುಮಾರು 14 ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ'' ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ  ಡಾ.ಬಿ.ಜೆ.ವಿಜಯಕುಮಾರ್, ವಕ್ತಾರ ಮಹೇಶ್ ಉಪಸ್ಥಿತರಿದ್ದರು.

ಇದನ್ನೂ ಓದಿ: ನ್ಯಾಯಾಲಯದಲ್ಲಿ ಗದ್ದಲ: ಬೇಷರತ್ ಕ್ಷಮೆ ಕೋರಿದ ವಕೀಲ ಜಗದೀಶ್ ಗೆ ದಂಡ ವಿಧಿಸಿ, ಪ್ರಕರಣ ಕೈಬಿಟ್ಟ ಹೈಕೋರ್ಟ್


 

Similar News