ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಸ್ಥಗಿತ: ಸುರ್ಜೆವಾಲ ಆಕ್ರೋಶ

Update: 2022-11-29 13:23 GMT

ಬೆಂಗಳೂರು, ನ.29: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವು 2022-23ನೆ ಸಾಲಿನಿಂದ 1 ರಿಂದ 8ನೆ ತರಗತಿ ವರೆಗಿನ ಎಸ್ಸಿ, ಎಸ್ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳ ಮೆಟ್ರಿಕ್ ಪೂರ್ವ(ಪ್ರಿ ಮೆಟ್ರಿಕ್) ವಿದ್ಯಾರ್ಥಿವೇತನ ಸ್ಥಗಿತಗೊಳಿಸಿರುವುದು ಖಂಡನೀಯ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ಅವರು, ಬಡ ಮಕ್ಕಳ ಶಿಕ್ಷಣದ ಹಕ್ಕನ್ನು ಅಂತ್ಯಗೊಳಿಸಲು ಬಿಜೆಪಿಯವರು ಹೊಸ ಷಡ್ಯಂತ್ರ ನಡೆಸಿದ್ದಾರೆ. ಇದು ಕ್ಷಮೆಗೂ ಅರ್ಹವಲ್ಲದ ಅಪರಾಧವಾಗಿದೆ. ಬಿಜೆಪಿಯ ಬಡವರ ವಿರೋಧಿ ನೀತಿಯ ಜೀವಂತ ಸಾಕ್ಷಿ ಇದಾಗಿದೆ ಎಂದು ಕಿಡಿಗಾರಿದ್ದಾರೆ.

ಅಧಿಕಾರಕ್ಕೆ ಬಂದ ಕೂಡಲೆ ಬಿಜೆಪಿ ಹಾಗೂ ನರೇಂದ್ರ ಮೋದಿ ಸರಕಾರ ನಿರಂತರವಾಗಿ ಅವಕಾಶ ವಂಚಿತರ ಅಧಿಕಾರಗಳ ಮೇಲೆ ದಾಳಿ ನಡೆಸಿಕೊಂಡು ಬರುತ್ತಿದೆ. ಪರಿಶಿಷ್ಟರ ಉಪ ಯೋಜನೆ ರದ್ದುಗೊಳಿಸಿರುವುದು, ಮೀಸಲಾತಿಯ ಮೇಲೆ ದಾಳಿ, ಎಸ್ಸಿ, ಎಸ್ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣದ ಬಜೆಟ್ ಅನುದಾನ ಕಡಿತ ಮಾಡಲಾಗಿದೆ ಎಂದು ಆರೋಪಿಸಿರುವ ಅವರು, ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಸ್ಥಗಿತಗೊಳಿಸಿದ ಆದೇಶವನ್ನು ಅಹಂಕಾರಿ ಪ್ರಧಾನಿ ಹಿಂಪಡೆಯಲೇಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸರಕಾರದ ಈ ನಿರ್ಧಾರವನ್ನು ದೇಶದ ಬಡವರು, ಕಾಂಗ್ರೆಸ್ ಪಕ್ಷ ಒಪ್ಪಲು ಸಾಧ್ಯವಿಲ್ಲ. ವಿದ್ಯಾರ್ಥಿವೇತನ ಸ್ಥಗಿತಗೊಳಿಸಿ ಹೊರಡಿಸಿರುವ ಈ ತುಘಲಕ್ ನಿರ್ಧಾರವನ್ನು ಕೇಂದ್ರ ಸರಕಾರ ಹಿಂಪಡೆಯದಿದ್ದರೆ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾಗಾಂಧಿ ನೇತೃತ್ವದಲ್ಲಿ ಬೃಹತ್ ಜನಾಂದೋಲನ ರೂಪಿಸಲಾಗುವುದು ಎಂದು ಸುರ್ಜೆವಾಲ ಎಚ್ಚರಿಕೆ ನೀಡಿದ್ದಾರೆ.

Similar News