ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ BJP ಶಾಸಕರು, ಮಂತ್ರಿಗಳು ಮಾಡದಿರುವ ಹಗರಣಗಳೇ ಇಲ್ಲ: ಡಿಕೆಶಿ

Update: 2022-11-29 13:57 GMT

ಚಿಕ್ಕಮಗಳೂರು, ನ.29: ''ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಬಿಜೆಪಿ ಪಕ್ಷದ ಶಾಸಕರು, ಮಂತ್ರಿಗಳು ಮಾಡದೇ ಇರುವ ಭ್ರಷ್ಟಾಚಾರವೇ ಇಲ್ಲ, ಬಿಜೆಪಿಯವರು ಜನರ ಭಾವನೆಗಳನ್ನು ಕೆರಳಿಸಿ ಅಧಿಕಾರ ಗಿಟ್ಟಿಸುವ ಕುತಂತ್ರ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಜನರ ಬದುಕು ಕಟ್ಟಿಕೊಡುವ ಉದ್ದೇಶದಿಂದ ಅಧಿಕಾರ ಕೊಡಿ ಎನ್ನುತ್ತಿದೆ. ಇದೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕಿರುವ ವ್ಯತ್ಯಾಸ'' ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮೂಡಿಗೆರೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀವ ಇದ್ದರೇ ಜೀವನ, ಆದರೆ ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಜನರ ಜೀವನವನ್ನೇ ದುಸ್ತರ ಮಾಡಿದ್ದಾರೆ. ಬಿಜೆಪಿಯವರು ಮಾಡದ ಭ್ರಷ್ಟಾಚಾರವೇ ಇಲ್ಲ. ಸರಕಾರದ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ. ಸರಕಾರ ಹಣವನ್ನು ಲೂಟಿ ಮಾಡಿ ಖಜಾನೆಯನ್ನೇ ಖಾಲಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.   

40 ಪರ್ಸೆಂಟ್ ಕಮೀಶನ್ ದಂಧೆಯಲ್ಲಿ ಬಿಜೆಪಿ ಸರಕಾರ ನಿರತವಾಗಿದೆ. ರಾಜ್ಯಾದ್ಯಂತ ರಸ್ತೆಗಳೂ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಉದ್ಯಮಿಗಳು ರಾಜ್ಯದಲ್ಲಿ ಹೂಡಿಕೆ ಮಾಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ರಾಜ್ಯದ ಯಾವ ಜಿಲ್ಲೆಗಳಲ್ಲೂ ಉದ್ಯಮಿಗಳು ಹೂಡಿಕೆ ಮಾಡಲು ಮುಂದೆ ಬರುತ್ತಿಲ್ಲ. ಇದರಿಂದ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎಂದು ಆರೋಪಿಸಿದರು.

ರಾಜ್ಯದ ಬಿಜೆಪಿ ಸರಕಾರ ಕಮೀಶನ್ ದಂಧೆಯಲ್ಲಿ ನಿರತವಾಗಿದೆ. ಸರಕಾರಿ ಹುದ್ದೆಗಳ ನೇಮಕಾತಿ, ವರ್ಗಾವಣೆಯಲ್ಲಿ ಹಗರಣಗಳೇ ನಡೆಯುತ್ತಿದ್ದು, ಈ ಹಗರಣದಲ್ಲಿ ಸರಕಾರದ ಮಂತ್ರಿಗಳು ಶಾಮೀಲಾಗಿದ್ದು, ಸರಕಾರದ ತಪ್ಪಿಗೆ ಐಎಎಸ್, ಐಪಿಎಸ್ ಅಧಿಕಾರಿಗಳು ಜೈಲಿಗೆ ಹೋಗುವಂತಾಗಿದೆ. ಆದರೆ ನಿಜವಾಗಿಯೂ ಜೈಲಿಗೆ ಹೋಗಬೇಕಾಗಿರುವುದು ಬಿಜೆಪಿ ಸರಕಾರದ ಮಂತ್ರಿಗಳು ಎಂದು ಟೀಕಿಸಿದ ಅವರು, ಬಿಜೆಪಿಯವರು ಮುಂದಿನ ಚುನಾವಣೆಯಲ್ಲಿ ವಾಮಮಾಗ್ರದ ಮೂಲಕ ಅಧಿಕಾರ ಹಿಡಿಯಲು ಹವಣಿಸುತ್ತಿದ್ದಾರೆ.  ಚಿಲುಮೆಯಂತಹ ಅನೇಕ ಸಂಸ್ಥೆಗಳ ಮೂಲಕ ಕಾಂಗ್ರೆಸ್‍ಗೆ ಮತ ನೀಡುವ ಸಮುದಾಯಗಳ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಿಸುತ್ತ ಮತಗಳನ್ನೇ ಖರೀದಿ ಮಾಡಿ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಭ್ರಷ್ಟಾಚಾರಕ್ಕಿರುವ ಮತ್ತೊಂದು ಹೆಸರೇ ಬಿಜೆಪಿ ಎಂದು ಆರೋಪಿಸಿದರು.

ಮೂಡಿಗೆರೆ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಸಂಬಂಧ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಆಕಾಂಕ್ಷಿಗಳೆಲ್ಲರೂ ಬಿಜೆಪಿ ಸೋಲಿಸಲು ಕಾತರದಿಂದ ಕಾಯುತ್ತಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಶೀಘ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವೆ ಮೋಟಮ್ಮ, ಮುಖಂಡರಾದ ಬಿ.ಎಲ್.ಶಂಕರ್, ಧ್ರುವನಾರಾಯಣ್, ಜಿಲ್ಲಾಧ್ಯಕ್ಷ ಅಂಶುಮಂತ್, ನಯನಾ ಮೋಟಮ್ಮ ಸೇರಿದಂತೆ ಕಾಂಗ್ರೆಸ್ ಪಕ್ಷದ ಜಿಲ್ಲಾ, ತಾಲೂಕಿನ ಮುಖಂಡರು ಉಪಸ್ಥಿತರಿದ್ದರು.

Similar News