ಘಟನೆ ನಡೆದು 4 ವರ್ಷಗಳಿಗೂ ಹೆಚ್ಚು ಕಾಲವಾಗಿದ್ದರೆ ನಿವೃತ್ತ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲಾಗದು: ಹೈಕೋರ್ಟ್‌

Update: 2022-11-29 14:37 GMT

ಬೆಂಗಳೂರು, ನ.29: ನಿವೃತ್ತ ಅಧಿಕಾರಿಗಳ ವಿರುದ್ಧ ಆರೋಪ ಮಾಡಲಾದ ಘಟನೆಯು ನಡೆದು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲವಾಗಿದ್ದರೆ ಕೆಸಿಎಸ್‍ಆರ್ ನ ನಿಯಮ 214(2)(ಬಿ)ರ ಅನ್ವಯ ಇಲಾಖಾ ತನಿಖಾ ಪ್ರಕ್ರಿಯೆಯನ್ನು ನಡೆಸುವಂತಿಲ್ಲ ಎಂದು ಹೈಕೋರ್ಟ್ (high court of karnataka) ಆದೇಶಿಸಿದೆ.  

ಈ ಸಂಬಂಧ ಕರ್ನಾಟಕ ಗೃಹ ಮಂಡಳಿಯಲ್ಲಿ ನಿವೃತ್ತ ಕಾರ್ಯಕಾರಿ ಎಂಜಿನಿಯರ್ ಗಳಾಗಿದ್ದ ಬೆಂಗಳೂರಿನ ಅನಿಲ್‍ಕುಮಾರ್ ಮತ್ತು ಟಿ.ಮಲ್ಲಣ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠವು ಮಾನ್ಯ ಮಾಡಿದೆ. ಜತೆಗೆ ದೋಷರೋಪ ಮೆಮೊ ಮತ್ತು ತನಿಖಾಧಿಕಾರಿ ನೇಮಕಾತಿಯನ್ನು ವಜಾ ಮಾಡಿ ಆದೇಶಿಸಿದೆ.  

ನಿವೃತ್ತ ಕಾರ್ಯಕಾರಿ ಎಂಜಿನಿಯರ್ ಗಳ ವಿರುದ್ಧ ತನಿಖೆ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ದೋಷಾರೋಪ ಮತ್ತು ತನಿಖಾ ಪ್ರಕ್ರಿಯೆ ಕುರಿತಂತಾ ಮೆಮೊವನ್ನು 2022ರ ಜೂ.21ರಂದು ಹೊರಡಿಸಲಾಗಿತ್ತು. ಕರ್ನಾಟಕ ನಾಗರಿಕ ಸೇವೆಗಳ ಕಾನೂನಿನ ನಿಯಮ 214(2)(ಬಿ)ರ ಅಡಿ ತನಿಖೆ ಆರಂಭಿಸಲು ದೋಷಾರೋಪ ಮೆಮೊ ನಿರ್ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೋಷಾರೋಪ ಮೆಮೊ ಅಮಾನ್ಯವಾಗುತ್ತದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ. 

ನೌಕರಿಯಲ್ಲಿದ್ದಾಗ ನಡೆದಿದ್ದ ಕೇಸ್‍ಗೆ ಸಂಬಂಧಿಸಿದಂತೆ ದೋಷಾರೋಪ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು, ಕೆಸಿಎಸ್‍ಆರ್ ನಿಯಮಗಳ ಅಡಿ ದೋಷಾರೋಪ ನಿರ್ಬಂಧಿಸಲಾಗಿದ್ದು, ಮನವಿಯು ವಜಾಕ್ಕೆ ಅರ್ಹವಾಗಿದೆ ಎಂದು ವಾದಿಸಿದ್ದರು. ಇದನ್ನು ನ್ಯಾಯಪೀಠವು ಮಾನ್ಯ ಮಾಡಿದೆ.

Similar News