ಮೈಸೂರು ಜಿಲ್ಲೆಯಲ್ಲೂ 1.45 ಲಕ್ಷ ಮತದಾರರ ಹೆಸರು ನಾಪತ್ತೆ: KPCC ವಕ್ತಾರ ಎಚ್.ಎ.ವೆಂಕಟೇಶ್ ಆರೋಪ

Update: 2022-12-03 05:13 GMT

ಮೈಸೂರು,ನ.29: ''ಮೈಸೂರು ಜಿಲ್ಲೆಯಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ 1,45,908 ಮತದಾರರ ಹೆಸರನ್ನು ಕಾರಣವಿಲ್ಲದೇ ಕೈಬಿಡಲಾಗಿದೆ. ಇದು ಅಕ್ಷಮ್ಯ ಲೋಪ'' ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಆರೋಪಿಸಿದ್ದಾತರೆ. 

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ದಾಖಲೆ ಬಿಡುಗಡೆಗೊಳಿಸಿ ಮಾತನಾಡಿದ ಅವರು,  'ಬೆಂಗಳೂರಿನ ಮಾದರಿಯಲ್ಲಿಯೇ ಮೈಸೂರಿನಲ್ಲಿಯೂ ಮತದಾರರ ಪಟ್ಟಿಗೆ ಕನ್ನ ಹಾಕಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. 

'ಮತದಾರರ ಪಟ್ಟಿಯಿಂದ ಹೆಸರು ಕೈ ಬಿಡಬೇಕಾದರೆ ಕಾರಣ ನೀಡಬೇಕು. ವರ್ಗಾವಣೆ, ಮುನ್ನ ಡಂಬಲ್ ಎಂಟ್ರಿಯಾಗಿದ್ದರೆ ತೆಗೆಯಲಾಗುತ್ತದೆ. ಕಾರಣವನ್ನೇ ನೀಡದೇ ಮತದಾರರ ಪಟ್ಟಿಯಿಂದ ಹೆಸರು ಕೈ ಬಿಡಲಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಪವಿತ್ರ ಕಾರ್ಯ' ಎಂದು ಬೇಸರ ವ್ಯಕ್ತಪಡಿಸದಿರು. 

ನರಸಿಂಹರಾಜ ಕ್ಷೇತ್ರದಲ್ಲಿ 18,007, ಚಾಮರಾಜ-16,242, ಕೃಷ್ಣರಾಜ-10,604, ಕೆ.ಆರ್.ನಗರ-17,856, ವರುಣಾ-11,987, ತಿ.ನರಸೀಪುರ-12,367, ಚಾಮುಂಡೇಶ್ವರಿ-17,847, ಎಚ್.ಡಿ.ಕೋಟೆ -10,479, ಹುಣಸೂರು-10,220, ಪಿರಿಯಾಪಟ್ಟಣ-8,570 ಹಾಗೂ ನಂಜನಗೂಡು ಕ್ಷೇತ್ರದಲ್ಲಿ 11,724 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ’ ಎಂದು ಮಾಹಿತಿ ನೀಡಿದರು.

''ಚುನಾವಣೆಯನ್ನು ಗೆಲ್ಲುವುದಕೋಸ್ಕರ ಬಿಜೆಪಿಯವರು ಏನನ್ನು ಮಾಡಲಿಕ್ಕೂ ಸಿದ್ಧರಿದ್ದಾರೆ. ದಯಮಾಡಿ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಪರೀಕ್ಷಿಸಿಕೊಳ್ಳಬೇಕು'' ಎಂದು ಮನವಿ ಮಾಡಿದರು.

''ಮತದಾರರ ಪಟ್ಟಿ ಕಳವು ಪ್ರಕರಣ ಬೆಳಕಿಗೆ ಬಂದಾಗ ಮುಖ್ಯಮಂತ್ರಿ ಏನೂ ಆಗಿಲ್ಲ ಎಂಬಂತೆ ಸಮರ್ಥಿಸಿದರು. ಅಧಿಕಾರಕ್ಕಾಗಿ ಬಿಜೆಪಿ ಅನೈತಿಕ ಮಾರ್ಗ ಹಿಡಿದಿದೆ. ಜನ ಜಾಗೃತರಾಗಬೇಕು. ಪ್ರಜಾಪ್ರಭುತ್ವ ಬುಡಮೇಲು ಮಾಡುವ ಈ ಪ್ರಯತ್ನದ ವಿರುದ್ಧ ಪ್ರಗತಿಪರರು, ಬುದ್ಧಿಜೀವಿಗಳು, ಸಾಹಿತಿಗಳು ದನಿ ಎತ್ತಬೇಕು '' ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಿ ಮತದಾರರ ಹಕ್ಕನ್ನು ಕಸಿಯುತ್ತಿರುವ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿದರು. ವಿಧಾನಸೌಧದಿಂದ ಕಾಣೆಯಾಗಿರುವ ಮುಖ್ಯಮಂತ್ರಿಗಳು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆಂದು ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್ ಮಾತನಾಡಿ, ಬೆಂಗಳೂರು ಬಳಿಕ ಮೈಸೂರಿನಲ್ಲಿಯೂ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಮತದಾರರನ್ನು ಕೈ ಬಿಡಲಾಗಿದೆ. ರಾಜ್ಯವ್ಯಾಪಿ ದೊಡ್ಡ ಜಾಲ ಹರಡಿರುವಂತಿದೆ. ಕೂಡಲೇ ರಾಜ್ಯ ಚುನಾವಣೆ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಕೆಲಸವನ್ನು ಸ್ಥಗಿತಗೊಳಿಸಬೇಕು. ಚುನಾವಣಾ ಕೆಲಸದಲ್ಲಿ ನಿಯೋಜಿತ ಅಧಿಕಾರಿಗಳನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಮಾತನಾಡಿ, ನಗರದ ಪ್ರತಿ ವಾರ್ಡ್‍ಗಳಲ್ಲಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕೊಡಲಿದ್ದಾರೆ. ಜನರ ಹಕ್ಕಿಗೆ ಚ್ಯುತಿ ತರುತ್ತಿರುವುದರ ವಿರುದ್ಧ ಆಂದೋಲನ ಮಾಡುತ್ತೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಭಾಸ್ಕರ್ ಎಲ್.ಗೌಡ, ಎನ್.ಎಸ್.ಗೋಪಿನಾಥ್, ಮಾಧ್ಯಮ ವಕ್ತಾರ ಮಹೇಶ್, ಗಿರೀಶ್ ಉಪಸ್ಥಿತರಿದ್ದರು.

''ಸಿದ್ದರಾಮಯ್ಯ ಅವರನ್ನು ಟೀಕಿಸಲು ಸಿ.ಟಿ.ರವಿಗೆ ಯೋಗ್ಯತೆ ಇಲ್ಲ. ಉನ್ನತ ಶಿಕ್ಷಣ ಸಚಿವರಾಗಿ ಕುಲಪತಿ ಹುದ್ದೆಗಳನ್ನು ಹರಾಜಿನಲ್ಲಿ ಆಯ್ಕೆ ಮಾಡಿದವರು ಸಿದ್ದರಾಮಯ್ಯ ಬಗ್ಗೆ ಮಾತಾಡುತ್ತಾರೆ. ಲೂಟಿ ರವಿ ಎಂದು ಸಿದ್ದರಾಮಯ್ಯ ಹೇಳಿರುವುದು ಸರಿಯಾಗಿದೆ''

 -ಎಚ್.ಎ.ವೆಂಕಟೇಶ್,  ಕೆಪಿಸಿಸಿ ವಕ್ತಾರ.
 

Similar News