ಪಿಎಫ್‌ಐ ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌

Update: 2022-11-30 10:24 GMT

ಬೆಂಗಳೂರು, ನ.30: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಮತ್ತದರ ಸಹ ಸಂಘಟನೆಗಳನ್ನು ʻಕಾನೂನುಬಾಹಿರ ಸಂಘಟನೆಗಳುʼ ಎಂದು ಘೋಷಿಸಿ ಅವುಗಳನ್ನು ಯುಎಪಿಎ  ಕಾಯಿದೆಯ ಸೆಕ್ಷನ್‌ 3(1) ಅಡಿ ಪ್ರದತ್ತವಾದ ಅಧಿಕಾರಗಳನ್ನು ಬಳಸಿ ತಕ್ಷಣದಿಂದ ಜಾರಿಗೆ ಬರುವಂತೆ 5 ವರ್ಷಗಳ ಕಾಲ ನಿಷೇಧ ಹೇರಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಹೊರಡಿಸಿದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಇಂದು ವಜಾಗೊಳಿಸಿದೆ ಎಂದು livelaw.in ವರದಿ ಮಾಡಿದೆ. 

ಪ್ರಸಕ್ತ ನ್ಯಾಯಾಂಗ ಬಂಧನದಲ್ಲಿರುವ ಪಿಎಫ್‌ಐ ಕಾರ್ಯಕರ್ತ ನಾಸಿರ್‌ ಪಾಷಾ ಎಂಬವರು ತಮ್ಮ ಪತ್ನಿಯ ಮೂಲಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಜಸ್ಟಿಸ್‌ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಇಂದು ಮೇಲಿನ ಆದೇಶ ಹೊರಡಿಸಿದೆ.

"ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರ ಕೆಲವೊಂದು ಘಟನೆಗಳ ಆಧಾರದಲ್ಲಿ ನಿಷೇಧಿಸಿ ಹೊರಡಿಸಿರುವ ಆದೇಶವು ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳನ್ನು ಕಸಿಯುವ ಉದ್ದೇಶ ಹೊಂದಿದೆ. ಹಲವಾರು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಸಂಘಟನೆಯನ್ನು ಹಲವಾರು ಮಂದಿ ಅನುಸರಿಸುತ್ತಿದ್ದಾರೆ ಹಾಗೂ ಅದರಿಂದ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಹೀಗಿರುವಾಗ ಯಾವುದೇ ನಿರ್ದಿಷ್ಟ ಕಾರಣವನ್ನು ಸೂಚಿಸದೆ ತಕ್ಷಣದಿಂದ ಅದನ್ನು ನಿಷೇಧಿಸಿ ಹೊರಡಿಸಿರುವ ಆದೇಶವು ಅಕ್ರಮವಾಗಿದೆ," ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ತಮ್ಮ ವಾದ ಮಂಡನೆ ವೇಳೆ ಅರ್ಜಿಯನ್ನು ವಿರೋಧಿಸಿದರಲ್ಲದೆ ಪಿಎಫ್‌ಐ ನಿಷೇಧಕ್ಕೆ ಅಗತ್ಯ ಕಾರಣಗಳನ್ನು ನೀಡಲಾಗಿದೆ ಹಾಗೂ ನಿಷೇಧ ಯಾವುದೇ ರೀತಿಯಲ್ಲಿ ಕಾನೂನುಬಾಹಿರವಾಗುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ರಸ್ತೆಯಲ್ಲಿ ಹೋಗೋ ನಾಯಿ ಕೂಡ ಜೆಡಿಎಸ್ ಗೆ ಹೋಗಲ್ಲ: ಕೆ.ಎಸ್. ಈಶ್ವರಪ್ಪ

Similar News