ರಾಜ್ಯ ಸರ್ಕಾರಕ್ಕೆ ದಂಡ ವಿಧಿಸುವ ಎಚ್ಚರಿಕೆ ನೀಡಿದ ಹೈಕೋರ್ಟ್‌; ಕಾರಣ ಏನು?

Update: 2022-11-30 13:12 GMT

ಬೆಂಗಳೂರು, ನ.30: ನಿವೃತ್ತ ಅಸಿಸ್ಟೆಂಟ್‌ ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರನ್ನು ಖುಲಾಸೆಗೊಳಿಸಿದ ಕರ್ನಾಟಕ ರಾಜ್ಯ ಆಡಳಿತಾತ್ಮಕ ಟ್ರಿಬ್ಯುನಲ್‌ ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಹೈಕೋರ್ಟ್‌ ಇಂತಹ ಕ್ಷುಲ್ಲಕ ಪ್ರಕರಣಗಳನ್ನು ದಾಖಲಿಸುವುದರ ವಿರುದ್ಧ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

"ಈ ಪ್ರಕರಣದ ಕೋರಿಕೆಯನ್ನು ಒಪ್ಪಿಕೊಂಡಲ್ಲಿ ಯಾವ ಸಂದೇಶ ಸಾರಿದಂತಾಗುತ್ತದೆ ಎಂಬ ಬಗ್ಗೆ ನಮಗೆ ಖಚಿತವಿಲ್ಲ, ಆದರೆ  ಈ ಪ್ರಕರಣದಲ್ಲಿ ವಾದ ಮಂಡಿಸಿದ ಅಡ್ವಕೇಟ್‌ ಜನರಲ್‌ ಅವರ ಉನ್ನತ ಸ್ಥಾನವನ್ನು ಪರಿಗಣಿಸಿ  ಈ ಪ್ರಕರಣವನ್ನು ದಾಖಲಿಸಿದ್ದಕ್ಕೆ ದಂಡ ವಿಧಿಸುವುದರಿಂದ ನಾವು ಹಿಂದೆ ಸರಿದಿದ್ದೇವೆ, ಆದರೆ ಇದು ಇಂತಹ ಪ್ರಕರಣ ದಾಖಲಿಸದಂತೆ ಒಂದು ಕೊನೆಯ ಎಚ್ಚರಿಕೆ ಎಂದು ಪರಿಗಣಿಸಬೇಕುʼʼ ಎಂದು ನ್ಯಾಯಾಲಯ ಹೇಳಿದೆ.

ʻʻಮುಂದೆ ಇಂತಹ ಕ್ಷುಲ್ಲಕ ಅರ್ಜಿಗಳು ಕಂಡು ಬಂದರೆ, ಹೆಚ್ಚು ದಂಡ ವಿಧಿಸುವುದರಿಂದ ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸುವುದರಿಂದ ನಮ್ಮನ್ನು ಏನೂ ತಡೆಯುವುದಿಲ್ಲ," ಎಂದು ನ್ಯಾಯಮೂರ್ತಿಗಳಾದ ಜಿ ನರೇಂದರ್‌ ಮತ್ತು ಪಿ ಎನ್‌ ದೇಸಾಯಿ  ಅವರ ಪೀಠ ಎಚ್ಚರಿಕೆ ನೀಡಿದೆ.

ಅಕ್ರಮ ಆಸ್ತಿ ಹೊಂದಿದ ಆರೋಪವನ್ನು ನಿವೃತ್ತ ಅಸಿಸ್ಟೆಂಟ್‌ ಸಬ್‌ ಇನ್‌ಸ್ಪೆಕ್ಟರ್‌ ರಹಮತುಲ್ಲಾ ಎದುರಿಸುತ್ತಿದ್ದರು. ಆದರೆ ಅವರ ವಿರುದ್ಧದ ಆರೋಪಗಳಿಗೆ ಯಾವುದೇ  ಪುರಾವೆ ಆಡಳಿತಾತ್ಮಕ ಟ್ರಿಬ್ಯುನಲ್‌ಗೆ ದೊರಕದೇ ಇದ್ದುದರಿಂದ ಅವರನ್ನು ಖುಲಾಸೆಗೊಳಿಸುತ್ತು. ಆದರೂ  ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಈ ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯವು ಸರ್ಕಾರಕ್ಕೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿ ಇಂತಹ ಕ್ಷುಲ್ಲಕ ಪ್ರಕರಣ ದಾಖಲಿಸಿದ್ದಕ್ಕಾಗಿ ರೂ 10 ಲಕ್ಷ ದಂಡ ವಿಧಿಸಬಾರದೇಕೆ ಎಂದು ಪ್ರಶ್ನಿಸಿತ್ತು.

ಇದಕ್ಕೆ ಉತ್ತರ ನೀಡಿದ್ದ ಅಡ್ವಕೇಟ್‌ ಜನರಲ್‌ ಮುಂದೆ ಇಂತಹ ಪ್ರಕರಣಗಳನ್ನು ಹೈಕೋರ್ಟ್‌ ಮುಂದೆ ತರಲಾಗುವುದಿಲ್ಲ ಎಂದು ಹೇಳಿ  ಅವುಗಳನ್ನು ಪರಿಹರಿಸುವ ನೀತಿಯನ್ನು ನ್ಯಾಯಾಲಯದ ಮುಂದಿಟ್ಟಿದ್ದರು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಎಚ್ಚರಿಕೆ ಮಾತ್ರ ನೀಡಿ ಆದೇಶ ಹೊರಡಿಸಿದೆ.

Similar News