ಬಾಬಾ ಬುಡಾನ್‍ಗಿರಿಯಲ್ಲಿ ದತ್ತ ಜಯಂತಿ ಆಚರಣೆಗೆ ಹೈಕೋರ್ಟ್ ಅನುಮತಿ

Update: 2022-11-30 17:55 GMT

ಬೆಂಗಳೂರು, ನ.30: ಚಿಕ್ಕಮಗಳೂರು ಜಿಲ್ಲೆಯ ಶ್ರೀಗುರು ದತ್ತಾತ್ರೇಯ ಬಾಬಾ ಬುಡಾನ್‍ ಸ್ವಾಮಿ ದರ್ಗಾದಲ್ಲಿ (Baba Budan giri) ಡಿ.6, 7 ಮತ್ತು 8ರಂದು ದತ್ತ ಜಯಂತಿ ಆಚರಣೆಗೆ ಹೈಕೋರ್ಟ್ ಅನುಮತಿ ನೀಡಿದೆ. 

ಪ್ರಕರಣದ ಕುರಿತ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಹಾಗೂ ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ. 

ಸರಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹಾಜರಾಗಿ, ಸರಕಾರ ಈಗಾಗಲೇ ನಿರ್ವಹಣಾ ಸಮಿತಿ ರಚಿಸಿದೆ. ಹಿಂದೂ, ಮುಸ್ಲಿಮ್ ಸದಸ್ಯರ ಸಮಿತಿಯಿಂದ ಅರ್ಚಕ, ಮುಝಾವರ್ ನೇಮಕ ಮಾಡಲಾಗಿದೆ. ಪ್ರತಿ ದಿನ ಎರಡೂ ಸಮುದಾಯದವರೂ ಪೂಜೆ ನಡೆಸುತ್ತಿದ್ದಾರೆ. ಹೀಗಾಗಿ, ದತ್ತ ಜಯಂತಿಗೆ  ಅನುಮತಿ ನೀಡಲು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ನ್ಯಾಯಪೀಠ ದತ್ತ ಜಯಂತಿ ಆಚರಣೆಗೆ ಅನುಮತಿ ನೀಡಿತು. 

ಪ್ರಕರಣವೇನು?: ಶ್ರೀಗುರು ದತ್ತಾತ್ರೇಯ ಬಾಬಾ ಬುಡಾನ್‍ ಸ್ವಾಮಿ ದರ್ಗಾದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಲು ಅರ್ಚಕ, ಮುಜಾವರ್ ನೇಮಕ ಮಾಡಿ ರಾಜ್ಯ ಸರಕಾರ 2018ರ ಮಾ.16ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಶ್ರೀಗುರು ದತ್ತಾತ್ರೇಯ ದೇವಸ್ಥಾನ ಸಂವರ್ಧನಾ ಸಮಿತಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. 

ಸರಕಾರದ ಆದೇಶವನ್ನು ರದ್ದುಪಡಿಸಿ 2021ರ ಡಿ.28ರಂದು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ಪ್ರಕರಣವನ್ನು ಕಾನೂನು ರೀತಿ ಹೊಸದಾಗಿ ಪರಿಶೀಲಿಸಬೇಕೆಂದು ಸರಕಾರಕ್ಕೆ ಸೂಚನೆ ನೀಡಿತ್ತು. ಈ ನಡುವೆ ಏಕ ಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಸಯ್ಯದ್ ಗೌಸ್ ಮುಹಿಯದ್ದೀನ್ ಶಾ ಖಾದ್ರಿ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು 2023ರ ಜ.12ಕ್ಕೆ ಮುಂದೂಡಿದೆ.
 

Similar News