ಹೊಸದಾಗಿ 24 ಅಬಕಾರಿ ತನಿಖಾ ಠಾಣೆ ಆರಂಭ: ಸಚಿವ ಕೆ.ಗೋಪಾಲಯ್ಯ

Update: 2022-11-30 16:18 GMT

ಬೆಂಗಳೂರು, ನ.30: ಹೊರ ರಾಜ್ಯಗಳಿಂದ ಅಕ್ರಮವಾಗಿ ರಾಜ್ಯಕ್ಕೆ ಬರುವ ಮದ್ಯವನ್ನು ತಡೆಯಲು ಶೀಘ್ರದಲ್ಲೆ ರಾಜ್ಯದ ವಿವಿಧೆಡೆ ಹೊಸದಗಿ 24 ಅಬಕಾರಿ ತನಿಖಾ ಠಾಣೆ ಆರಂಭಿಸಲಾಗುವುದು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಬಕಾರಿ ಇಲಾಖೆಯಲ್ಲಿ ಸದ್ಯ 16 ತನಿಖಾ ಠಾಣೆಗಳಿವೆ. ವಾಣಿಜ್ಯ ಇಲಾಖೆಯ 24 ತನಿಖಾ ಠಾಣೆಗಳನ್ನೆ ಅಬಕಾರಿ ಇಲಾಖೆಯ ಠಾಣೆಗಳಾಗಿ ಪರಿವರ್ತಿಸಲಾಗುವುದು ಎಂದರು.

ಈ ತನಿಖಾ ಠಾಣೆಗಳಿಗೆ ಇನ್ಸ್‍ಪೆಕ್ಟರ್, ಸಬ್ ಇನ್ಸ್‍ಪೆಕ್ಟರ್, ಕಾನ್ಸ್‍ಟೇಬಲ್ ಸೇರಿದಂತೆ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಗೋವಾ, ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳಿಂದ ಅಕ್ರಮವಾಗಿ ಸರಬರಾಜು ಮಾಡುವ ಮದ್ಯವನ್ನು ತಡೆಯಲು ಈ ತನಿಖಾ ಠಾಣೆಗಳ ಸ್ಥಾಪನೆಯಿಂದ ಸಹಕಾರಿಯಾಗಲಿದೆ. ಅಲ್ಲದೆ, ರಾಜ್ಯದ ಅಬಕಾರಿ ಆದಾಯದಲ್ಲಿಯೂ ಹೆಚ್ಚಳವಾಗಲಿದೆ ಎಂದು ಅವರು ತಿಳಿಸಿದರು.

ಹೊಸದಾಗಿ ಬಾರ್‍ಗಳನ್ನು ಆರಂಭಿಸಲು ಪರವಾನಗಿ ನೀಡುವ ಪ್ರಸ್ತಾವನೆ ಸರಕಾರದ ಮುಂದಿಲ್ಲ. ಇದು ಚುನಾವಣಾ ವರ್ಷವಾಗಿರುವುದರಿಂದ ಯಾವುದೇ ಹೊಸ ವೈನ್ ಸ್ಟೋರ್‍ಗಳಿಗೂ ಅನುಮತಿ ನೀಡುವುದಿಲ್ಲ. ಅಬಕಾರಿ ಇಲಾಖೆಗೆ 29 ಸಾವಿರ ಕೋಟಿ ರೂ.ತೆರಿಗೆ ಸಂಗ್ರಹದ ಗುರಿ ನೀಡಲಾಗಿತ್ತು. ಅದನ್ನು ಮೀರಿ ಒಂದು ಸಾವಿರ ಕೋಟಿ ರೂ.ಹೆಚ್ಚುವರಿ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ಗೋಪಾಲಯ್ಯ ಹೇಳಿದರು. 

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಹಾಗೂ ಹಾಸನ ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಅವಕಾಶವಿದೆ. ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ಕುರಿತು ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

Similar News