ಸಾಹಿತ್ಯ ಸಮ್ಮೇಳನ | ಡಿ.1ರಿಂದ ನೋಂದಣಿಗೆ ಚಾಲನೆ: ಡಾ. ಮಹೇಶ್ ಜೋಶಿ

Update: 2022-11-30 16:25 GMT

ಬೆಂಗಳೂರು, ನ.30: ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಕವಿ ಡಾ. ದೊಡ್ಡರಂಗೇಗೌಡರ ಅಧ್ಯಕ್ಷತೆಯಲ್ಲಿ ಜನವರಿ 6, 7 ಹಾಗೂ 8 ರಂದು ಮೂರು ದಿನಗಳ ಕಾಲ ಹುಬ್ಬಳ್ಳಿ-ಹಾವೇರಿ ಮುಖ್ಯರಸ್ತೆಯ ಆರ್.ಟಿ.ಓ. ಕಚೇರಿ ಸಮೀಪದ ಅಜ್ಜಯ್ಯನ ದೇವಸ್ಥಾನದ ಎದುರಿನ ಸ್ಥಳದಲ್ಲಿ ಸಮ್ಮೇಳನವನ್ನು ನಡೆಸಲು ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿ ಅಧ್ಯಕ್ಷ ಡಾ. ಮಹೇಶ್ ಜೋಶಿ ತಿಳಿಸಿದ್ದಾರೆ. 

ಸಮ್ಮೇಳನದಲ್ಲಿ ಭಾಗವಹಿಸುವವರ ಪ್ರತಿನಿಧಿ ನೋಂದಣಿ, ಪುಸ್ತಕ ಹಾಗೂ ವಾಣಿಜ್ಯ ಮಳಿಗೆಗಳ ನೋಂದಣಿ, ಸಮ್ಮೇಳನದ ಆಮಂತ್ರಣ ಪತ್ರಿಕೆ, ವಿವಿಧ ಸಮಿತಿಗಳು ಮತ್ತು ಸಮಿತಿಯ ಸದಸ್ಯರ ವಿವರಗಳು, ಹಾವೇರಿ ಕುರಿತಂತೆ ಮಾಹಿತಿ, ಸಾರಿಗೆ, ಸಂಪರ್ಕ, ವಸತಿ ವಿವರ, ಸಹಾಯವಾಣಿ ಸೇರಿದಂತೆ ಸಮ್ಮೇಳನದ ಸಂಪೂರ್ಣ ಮಾಹಿತಿ, ವಿವರಗಳನ್ನು ಒದಗಿಸಲು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಧುನಿಕ ಮೊಬೈಲ್ ಆ್ಯಪ್ ಅನ್ನು ಪರಿಷತ್ತು ಸಿದ್ಧಪಡಿಸಿದೆ ಎಂದು ಅವರು ಹೇಳಿದ್ದಾರೆ.
  
ಸಮ್ಮೇಳನದ ಪ್ರತಿನಿಧಿ ನೋಂದಣಿಗಾಗಿ ಗೂಗಲ್ ಪ್ಲೇ ಸ್ಟೋರ್‍ನಲ್ಲಿ “ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ” ಆ್ಯಪ್ ಮೂಲಕ 500 ರೂ.ಗಳ ಶುಲ್ಕವನ್ನು ಪಾವತಿಸಿ ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಪ್ರತಿನಿಧಿಗಳಾಗಿ ಭಾಗವಹಿಸಲು ನೋಂದಾಯಿಸಲು ಇಚ್ಛಿಸುವವರು ಕಡ್ಡಾಯವಾಗಿ ಸಾಹಿತ್ಯ ಪರಿಷತ್ತಿನ ಸದಸ್ಯತ್ವ  ಹೊಂದಿರಬೇಕು. ಒಂದು ವೇಳೆ ಇನ್ನೂ ಪರಿಷತ್ತಿನ ಸದಸ್ಯರಾಗದಿದ್ದಲ್ಲಿ ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಕಸಾಪ ಆ್ಯಪ್ ಮೂಲಕ  ಸದಸ್ಯತ್ವ ಪಡೆದುಕೊಳ್ಳಬಹುದಾಗಿದೆ ಎಂದು ಮಹೇಶ್ ಜೋಶಿ ತಿಳಿಸಿದ್ದಾರೆ.

ಡಿ.1ರಿಂದ ನೋಂದಣಿ ಪ್ರಾರಂಭವಾಗಲಿದ್ದು, ಡಿ.18ಕ್ಕೆ ಮುಕ್ತಾಯಗೊಳ್ಳಲಿದೆ. ಅವಧಿ ಮೀರಿ ಬರುವ ಕೋರಿಕೆಗಳಿಗೆ ಹಾಗೂ ಸಮ್ಮೇಳನ ನಡೆಯುವ ಸ್ಥಳದಲ್ಲಿ ಪ್ರತಿನಿಧಿಗಳ ನೋಂದಣಿಗೆ ಅವಕಾಶವಿರುವುದಿಲ್ಲ. ಪುಸ್ತಕ ಮಳಿಗೆ ಹಾಗೂ ವಾಣಿಜ್ಯ ಮಳಿಗೆಗಳ ನೋಂದಣಿಗಾಗಿ  ಗೂಗಲ್ ಪ್ಲೇ ಸ್ಟೋರ್‍ನಲ್ಲಿ “ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ” ಆ್ಯಪ್ ಮೂಲಕ ಪುಸ್ತಕ ಮಳಿಗೆ ಒಂದಕ್ಕೆ 3,000 ರೂ. ಹಾಗೂ ವಾಣಿಜ್ಯ ಮಳಿಗೆ ಒಂದಕ್ಕೆ 5,000 ರೂ.ಗಳ ಶುಲ್ಕವನ್ನು ಪಾವತಿಸಿ ಮಳಿಗೆಗಳನ್ನು ತೆರೆಯಲು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Similar News