ಜ್ಞಾನ ಉಳ್ಳವರು ಮಾತ್ರ ರಾಜನಂತೆ ಜೀವಿಸಲು ಸಾಧ್ಯ: ಸಚಿವ ಶ್ರೀರಾಮುಲು

Update: 2022-11-30 16:30 GMT

ಬೆಂಗಳೂರು, ನ.30: ಹಿಂದಿನ ಕಾಲದಲ್ಲಿ ಶಕ್ತಿ, ಹಣವಿದ್ದರೆ ರಾಜರಾಗುತ್ತಿದ್ದರು. ಈಗ ಪ್ರಜಾಪ್ರಭುತ್ವದಲ್ಲಿ ಜ್ಞಾನ ಉಳ್ಳವರು ಮಾತ್ರ ರಾಜನಂತೆ ಜೀವಿಸಲು ಸಾಧ್ಯ ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಸರಕಾರಿ ಕಲಾ ಕಾಲೇಜಿನಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಕನ್ನಡ ಸಂಘ, ಎನ್‍ಸಿಸಿ, ಎನ್‍ಎಸ್‍ಎಸ್ ಇತರೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣದಿಂದ ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆ. ಗುರುಶಿಷ್ಯರ ಸಂಬಂಧ ದೇವರು ಮತ್ತು ಭಕ್ತರ ನಡುವಿನ ಸಂಬಂಧದಂತಿರಬೇಕು ಆಗ ಮಾತ್ರ ಸಂಸ್ಕಾರವುಳ್ಳ ಶಿಕ್ಷಣವನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಲಾ ಕಾಲೇಜು ಬೆಂಗಳೂರಿನ ಮಧ್ಯಭಾಗದಲ್ಲಿ ಸುಮಾರು 3 ಎಕರೆಯಷ್ಟು ವಿಸ್ತೀರ್ಣವನ್ನು ಹೊಂದಿದೆ. ಆ ಕಾಲದಲ್ಲಿ ದೂರದೃಷ್ಟಿಯಿಂದ ಬಡಮಕ್ಕಳ ಶಿಕ್ಷಣಕ್ಕಾಗಿ ಇಲ್ಲಿ ಸ್ಥಳವನ್ನು ಒದಗಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್‍ರನ್ನು ಸ್ಮರಿಸಿಕೊಳ್ಳಬೇಕು. ಕಾಲೇಜನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸದಾ ಕೆಲಸ ಮಾಡುತ್ತೇನೆ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಕಾಲೇಜಿನ ಅಭಿವೃದ್ಧಿ ಅನುದಾನವನ್ನು ನೀಡಲಾಗುತ್ತದೆ ಎಂದ ಅವರು ಮಕ್ಕಳಿಗೆ ಏನೇನು ಸೌಲಭ್ಯಬೇಕೆಂದು ಪಟ್ಟಿ ಮಾಡಿ ಕೊಟ್ಟರೆ ಸರಕಾರದಲ್ಲಿ ಚರ್ಚಿಸಲು ಅನುಕೂಲವಾಗುತ್ತದೆ ಎಂದರು.

ಸಂಸ್ಕೃತಿ ಚಿಂತಕ ಡಾ.ವೈ.ಕೆ.ನಾರಾಯಣಸ್ವಾಮಿ ಮಾತನಾಡಿ, ಬಡ ಹಾಗೂ ಹಿಂದುಳಿದ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು. ಹಳ್ಳಿಗಳಿಂದ ನಗರ ಪ್ರದೇಶಕ್ಕೆ ಶಿಕ್ಷಣವನ್ನು ಪಡೆಯಲು ಬರುವ ವಿದ್ಯಾರ್ಥಿಗಳು ಅಡ್ಡದಾರಿ ಹಿಡಿಯಬಾರದು. ಶೈಕ್ಷಣಿಕವಾಗಿ ಉನ್ನತ ಶ್ರೇಣಿ ಪಡೆದು ಹೆತ್ತವರಿಗೆ ಗೌರವ ತಂದುಕೊಡುವ ಕೆಲಸವಾಗಬೇಕು ಎಂದರು.

ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಪಿ.ಟಿ ಶ್ರೀನಿವಾಸ ನಾಯಕ ಉಪಸ್ಥಿತರಿದ್ದರು. 

Similar News