ದರ್ಪದಿಂದ ವರ್ತಿಸಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಎಚ್ಡಿಕೆ ಆಗ್ರಹ

►ಬೆಳಗಾವಿ | ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಥಳಿತ ವಿವಾದ ► ದೂರು ಕೊಡಲು ಹೋದ ವಿದ್ಯಾರ್ಥಿ ಮೇಲೆ ಪೊಲೀಸರ ಹಲ್ಲೆ: ಆರೋಪ

Update: 2022-12-01 07:57 GMT

ಬೆಂಗಳೂರು: ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸುತ್ತೇನೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ದೂರು ಕೊಡಲು ಹೋದ ಆ ವಿದ್ಯಾರ್ಥಿ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿರುವುದು ಕನ್ನಡಕ್ಕೆ, ಕರ್ನಾಟಕಕ್ಕೆ ಬಗೆದ ದೊಡ್ಡ ದ್ರೋಹ ಎಂದು ಟೀಕಿಸಿದ್ದಾರೆ.

ಡಿಸಿಪಿ ಹಾಗೂ ಎಸಿಪಿ ಮಟ್ಟದ ಅಧಿಕಾರಿಗಳು ಇಬ್ಬರು ಬಾಲಕನ ವಿಷಯದಲ್ಲಿ ಕ್ರೂರವಾಗಿ ವರ್ತಿಸಿ ದರ್ಪ ತೋರಿಸಿರುವುದು ಸರಿಯಲ್ಲ. ಡಿಸಿಪಿ ಅಧಿಕಾರಿ ಆ ಬಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿ, ಬೂಟು ಕಾಲಿನಿಂದ ಒದ್ದಿರುವುದು ಅಕ್ಷಮ್ಯ ಹಾಗೂ ಅನಾಗರಿಕ ವರ್ತನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ತಕ್ಷಣವೇ ಬಾಲಕನ ಮೇಲೆ ಹಲ್ಲೆ ನಡೆಸಿದ ಇತರೆ ಬಾಲಕರನ್ನು ವಶಕ್ಕೆ ಪಡೆದು, ಅವರಿಗೆ ಚಿತಾವಣೆ ನೀಡಿದವರನ್ನು ಬಂಧಿಸಬೇಕು ಹಾಗೂ ಕನ್ನಡ ಬಾವುಟ ಹಾರಿಸಿದ ಬಾಲಕನ ಮೇಲೆ ದುಂಡಾವರ್ತನೆ ತೋರಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Similar News