ರೌಡಿಗಳ ಪರಿಚಯವೇ ಇಲ್ಲ, ನಾಗ ಯಾರು, ತಿಮ್ಮ ಯಾರು ನನಗೆ ಗೊತ್ತಿಲ್ಲ: ಸಚಿವ ಸೋಮಣ್ಣ ಸ್ಪಷ್ಟನೆ

Update: 2022-12-01 12:35 GMT

ಬೆಂಗಳೂರು, ಡಿ. 1: ರೌಡಿಶೀಟರ್ ಒಬ್ಬ ನನ್ನ ಕಚೇರಿಗೆ ಭೇಟಿ ನೀಡಿದ್ದಾನೆಂಬ ಮಾಧ್ಯಮಗಳ ವರದಿಯಿಂದ ನನಗೆ ಅತೀವ ಬೇಸರವಾಗಿದೆ. 50 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಸಾವಿರಾರು ಜನ ನನ್ನ ಮನೆಯ ಹತ್ತಿರ ಬಂದು ಹೋಗಿದ್ದಾರೆ. ಅದರಲ್ಲಿ ನಾಗ ಯಾರು, ತಿಮ್ಮ ಯಾರು ಎಂಬುದು ನನಗೆ ಗೊತ್ತಿಲ್ಲ’ ಎಂದು ವಸತಿ ಸಚಿವ ವಿ.ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಾಗ ಎಂಬುವವರನ್ನು ನಾನೂ ನೋಡಿಲ್ಲ. ಒಂದು ಗಂಟೆಯಲ್ಲ, ಒಂದು ನಿಮಿಷವೂ ನಾನು ಮಾತನಾಡಿಲ್ಲ. ನನ್ನ ಜೀವನ ತೆರೆದ ಪುಸ್ತಕವಿದ್ದಂತೆ. ನಾನು ಆ ತರಹದ ಜೀವನ ಮಾಡಿಲ್ಲ. ಸಾರ್ವಜನಿಕ ರಸ್ತೆ ಎಂದ ಮೇಲೆ ಯಾರ್ಯಾರೋ ತಿರುಗಾಡುತ್ತಾರೆ. ಅದಕ್ಕೆ ನಾನು ಹೇಗೆ ಹೊಣೆಯಾಗಲು ಸಾಧ್ಯ’ ಎಂದು ಪ್ರಶ್ನಿಸಿದರು.

ಒಳ್ಳೆಯವರನ್ನೂ ರಸ್ತೆಗೆ ಕರೆ ತಂದು ನಿಲ್ಲಿಸುವ ಕೆಲಸ ಮಾಡಬೇಡಿ. ರಾಜಕಾರಣದಲ್ಲಿ 11 ಚುನಾವಣೆ ಎದುರಿಸಿದ್ದೇನೆ. ನನ್ನ ಜೀವನದಲ್ಲಿ ರೌಡಿಗಳ ಪರಿಚಯವೇ ಇಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ನಮ್ಮ ವಯಸ್ಸು, ನಮ್ಮ ಸೇವೆಯನ್ನು ಮಾಧ್ಯಮ ಸ್ನೇಹಿತರೂ ಒಮ್ಮೆ ಅವಲೋಕಿಸಿಕೊಳ್ಳಬೇಕು’ ಎಂದು ಅವರು ಹೇಳಿದರು.

‘ಯಾವುದೇ ಆರೋಪ ಮಾಡುವ ಮೊದಲು ನಮ್ಮ ರಾಜಕೀಯ ಇತಿಹಾಸವನ್ನು ನೋಡಬೇಕು. ಸುಖಾ ಸುಮ್ಮನೆ ಸುಳ್ಳು ಆರೋಪ ಮಾಡಿ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಬೇಡಿ. ದಯಮಾಡಿ ಇಂತಹ ಸುದ್ದಿ ಬಿತ್ತರಿಸುವ ವೇಳೆ ಪೂರ್ವಾಪರ ತಿಳಿದುಕೊಳ್ಳಿ’ ಎಂದು ಸೋಮಣ್ಣ ಇದೇ ವೇಳೆ ಮನವಿ ಮಾಡಿದರು.

Full View

Similar News