ಕರ್ನಾಟಕವನ್ನು ಭ್ರಷ್ಟಾಚಾರದ ರಾಜಧಾನಿ ಮಾಡಿದ BJP: ಡಿ.ಕೆ.ಶಿವಕುಮಾರ್ ವಾಗ್ದಾಳಿ

Update: 2022-12-01 13:02 GMT

ಕಲಬುರಗಿ, ಡಿ.1: ಕರ್ನಾಟಕಕ್ಕೆ ಜಾಗತಿಕ ಮಟ್ಟದಲ್ಲಿ ಇದ್ದ ಕೀರ್ತಿಯನ್ನು ಅಳಿಸಿ, ದೇಶದ ಭ್ರಷ್ಟಾಚಾರದ ರಾಜಧಾನಿ ಎಂಬ ಕುಖ್ಯಾತಿ ನೀಡಿದ್ದು ಬಿಜೆಪಿ ಸರಕಾರದ ಸಾಧನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆ ಹೆಚ್ಚಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಗುರುವಾರ ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಅಧಿಕಾರ ಕಳೆದುಕೊಂಡು, ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಗಾಬರಿಯಲ್ಲಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದರು.

ನೇಮಕಾತಿ, ಗುತ್ತಿಗೆಯಲ್ಲಿ ಲೂಟಿ ಮಾಡಿ ಆಯಿತು. ಕಡೆಗೆ ಈಗ ಮತ ಕದಿಯುತ್ತಿದ್ದಾರೆ. ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಮತದಾರರ ಹೆಸರು ಕೈಬಿಡಲಾಗಿದೆ. ಇದರಿಂದ ರಾಜ್ಯದ ಗೌರವ ನಾಶ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು. 

ಕಾಂಗ್ರೆಸ್ ನಲ್ಲಿ ಬಹಳಷ್ಟು ರೌಡಿಗಳಿದ್ದು, ಲೆಕ್ಕ ಹಾಕಿ ಹೇಳಲಿ ಎಂಬ ಬಿಜೆಪಿ ಮುಖಂಡರ ಹೇಳಿಕೆ ಬಗ್ಗೆ ಉತ್ತರಿಸಿದ ಅವರು, ಈಗ ಬಿಜೆಪಿಯವರು ಯಾರ ಜತೆ ಪ್ರೀತಿ, ವಿಶ್ವಾಸ ಹೊಂದಿದ್ದಾರೆ, ಅವರ ಸಂಸ್ಕೃತಿ ಏನು ಎಂಬುದು ಎಲ್ಲವೂ ಬಹಿರಂಗವಾಗುತ್ತಿದೆ. ಇದೇನು ಹೊಸತಲ್ಲ. ತಮ್ಮಲ್ಲಿರುವ ಕಲಹ ಬಿಟ್ಟು ಬೇರೆಯವರ ಕಲಹದ ಬಗ್ಗೆ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ರಾಜ್ಯಾದ್ಯಂತ 60 ರೌಡಿಗಳು ಬಿಜೆಪಿ ಸೇರುತ್ತಿದ್ದಾರೆ: KPCC ವಕ್ತಾರರ ಎಂ. ಲಕ್ಷ್ಮಣ್

ನಮ್ಮ ಪಕ್ಷದ ಸಿದ್ಧಾಂತ ಹಾಗೂ ನಾಯಕತ್ವ ಒಪ್ಪಿ ಯಾರೆಲ್ಲಾ ಷರತ್ತು ರಹಿತವಾಗಿ ಪಕ್ಷ ಸೇರಲು ಬಯಸುತ್ತಾರೋ ಅವರು ಅರ್ಜಿ ಹಾಕಲಿ. ನಾವು ಯಾರ ಜತೆ ಸಂಪರ್ಕ ಹೊಂದಿದ್ದೇವೆ ಎಂಬುದರ ಬಗ್ಗೆ ಈಗ ಬಹಿರಂಗಪಡಿಸುವುದಿಲ್ಲ. ಈ ವಿಚಾರವಾಗಿ ಅಲ್ಲಂ ವೀರಭದ್ರಪ್ಪ ಅವರ ಸಮಿತಿ ಇದೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು ಸ್ಥಳೀಯ ಮಟ್ಟದ ನಾಯಕರವರೆಗೆ ಎಲ್ಲರ ಜತೆ ಚರ್ಚೆ ಮಾಡಿ, ಪಕ್ಷಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

ನಮ್ಮಲ್ಲಿ ಯಾವುದೇ ಅಂತರವಿಲ್ಲ. ಇದನ್ನು ಬಿಜೆಪಿ ಹಾಗೂ ಮಾಧ್ಯಮದವರು ಸೃಷ್ಟಿಸುತ್ತಿದ್ದಾರೆ. ರಾಜಕೀಯ ನಿಂತ ನೀರಲ್ಲ. ಇಲ್ಲಿ ಯಾರೂ ಶಾಶ್ವತವಲ್ಲ. ಪಿಜಿಆರ್ ಸಿಂಧ್ಯಾ ಜತೆ ನಾನು ಚುನಾವಣೆಯಲ್ಲಿ ಹೋರಾಡಿದರೂ, ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿಲ್ಲವೇ? ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮಧ್ಯೆ ಅಂತರ ಇದ್ದರೂ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಪತ್ರ ನೀಡಲಿಲ್ಲವೇ? ಎಂದು ಅವರು ಪ್ರಶ್ನಿಸಿದರು.

ಬಿಜೆಪಿಯಲ್ಲಿ ಬಿರುಕಿದ್ದು, ನಮ್ಮಲ್ಲಿ ಬಿರುಕು ಮೂಡಿಸಲು ಯತ್ನಿಸುತ್ತಿದ್ದಾರೆ. ಅವರ ಪಕ್ಷದಲ್ಲಿ ಜಗದೀಶ್ ಶೆಟ್ಟರ್, ಸದಾನಂದಗೌಡ, ಬಸನಗೌಡ ಯತ್ನಾಳ್, ಯಡಿಯೂರಪ್ಪ ಗುಂಪು ಇಲ್ಲವೇ. ಅವರ ಪಕ್ಷದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮೊದಲು ಅದನ್ನು ಸರಿಪಡಿಸಿಕೊಳ್ಳಲಿ ಎಂದು ಶಿವಕುಮಾರ್ ಹೇಳಿದರು.

ರೌಡಿ ನಾಗ ಸಚಿವ ಸೋಮಣ್ಣ ನಿವಾಸಕ್ಕೆ ಭೇಟಿ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಅವರ ಪಕ್ಷದಲ್ಲಿ ಕಾರ್ಯಕರ್ತರು ಇಲ್ಲ. ಹೀಗಾಗಿ ರೌಡಿಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದು, ಹೀಗಾಗಿ ಅವರು ರೌಡಿಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

Full View

Similar News