ಪರಿಶಿಷ್ಟರ ಮೀಸಲಾತಿ ಹೆಚ್ಚಳ ಪ್ರಸ್ತಾವವನ್ನು ಕಸದ ಬುಟ್ಟಿಗೆ ಎಸೆದ ಮೋದಿ ಸರಕಾರ: ರಣದೀಪ್ ಸಿಂಗ್ ಸುರ್ಜೇವಾಲಾ

''ಡಿ.10ರಂದು ಕಲಬುರಗಿಯಲ್ಲಿ ಜನಾಂದೋಲನ ಸಮಾವೇಶ''

Update: 2022-12-01 13:58 GMT

ಕಲಬುರಗಿ, ಡಿ.1: ಪರಿಶಿಷ್ಟರ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಸಲ್ಲಿಸಿರುವ ಪ್ರಸ್ತಾವವನ್ನು ಕೇಂದ್ರದ ನರೇಂದ್ರ ಮೋದಿ ಸರಕಾರ ಕಸದ ಬುಟ್ಟಿಗೆ ಎಸೆದಿದೆ. ಪರಿಶಿಷ್ಟರ ಮೀಸಲಾತಿ ಹೆಚ್ಚಳ ಬಿಜೆಪಿಯಿಂದ ಅಸಾಧ್ಯ. ಇದು ಕೇವಲ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಗದದ ಮೇಲೆ ಮೀಸಲಾತಿ ಹೆಚ್ಚಳ ಮಾಡಿದರೆ ಸಾಲದು. ಅದನ್ನು ಸಂವಿಧಾನದಲ್ಲಿ ಸೇರಿಸಬೇಕು. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ನಾವು ಸಂವಿಧಾನಕ್ಕೆ ತಿದ್ದುಪಡಿ ತಂದೆವು. ವಿಶೇಷ ಸ್ಥಾನಮಾನ ಅಸಾಧ್ಯ ಎಂದು ಭಾವಿಸಿದ್ದರೆ ಇದು ಸಾಧ್ಯವಾಗುತ್ತಿತ್ತೆ? ಎಂದು ಪ್ರಶ್ನಿಸಿದರು.

ಬಡವರು, ರೈತರು, ಯುವಕರು, ಮಹಿಳೆಯರ ಮೇಲೆ ಆಗುತ್ತಿರುವ ಪ್ರಹಾರದ ವಿರುದ್ಧ ನಾವು ಜನಾಂದೋಲನ ರೂಪಿಸುತ್ತಿದೆ. ಜನರ ಬದುಕಿನ ಜತೆ ಚೆಲ್ಲಾಟ ಆಡುವುದು ಬಿಜೆಪಿ ಕೆಲಸ. ಆದರೆ ಕಾಂಗ್ರೆಸ್ ನದ್ದು ಜನರ ಬದುಕು ಕಟ್ಟುವ ಕೆಲಸವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಜನರ ಜತೆ ಬಿಜೆಪಿ ಸರಕಾರ ಆಡುತ್ತಿರುವ ಆಟವನ್ನು ನಿಲ್ಲಿಸಬೇಕಿದೆ. ಬಿಜೆಪಿ ಸಮಾಜ ಒಡೆದರೆ, ನಾವು ಸಮಾಜ ಒಂದುಗೂಡಿಸುತ್ತೇವೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದ ದೊಡ್ಡ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಈ ಭಾಗದಲ್ಲಿ ತುಂಗಭದ್ರಾ ಆಣೆಕಟ್ಟು, ರಾಯಚೂರಿನಲ್ಲಿ ರಾಜೀವ್ ಗಾಂಧಿ ಥರ್ಮಲ್ ಕೇಂದ್ರ, ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ, ಇಎಸ್‍ಐ ಆಸ್ಪತ್ರೆ ನಿರ್ಮಾಣ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ, ವಿಶೇಷ ಸ್ಥಾನಮಾನ ನೀಡುವುದರವರೆಗೂ ಎಲ್ಲವನ್ನೂ ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಸುರ್ಜೇವಾಲ ತಿಳಿಸಿದರು.

ಈ ವಿಶೇಷ ಸ್ಥಾನಮಾನದ ಪರಿಣಾಮ ಈ ಭಾಗದ ಸುಮಾರು 40 ಸಾವಿರ ಮಕ್ಕಳಿಗೆ ವೈದ್ಯಕೀಯ ಸೀಟು ಲಭಿಸಿದೆ. ಕಾಂಗ್ರೆಸ್ ಸರಕಾರದ 5 ವರ್ಷಗಳ ಅವಧಿಯಲ್ಲಿ 30 ಸಾವಿರ ಯುವಕರಿಗೆ ಸರಕಾರಿ ನೌಕರಿ ನೀಡಲಾಗಿದೆ. ಈಗ ಈ ಎಲ್ಲ ಕಾರ್ಯಗಳನ್ನು ಪ್ರಶ್ನೆ ಮಾಡಲಾಗುತ್ತಿದೆ. ಡಿ.10ರಂದು ಹೊಸ ಸಂಕಲ್ಪದಿಂದ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಯಜ್ಞ ಆರಂಭಿಸಬೇಕಿದೆ ಎಂದು ಅವರು ಹೇಳಿದರು. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕಲ್ಯಾಣ ಕರ್ನಾಟಕದ ಭಾಗದ ಕಲ್ಯಾಣಕ್ಕೆ ಶಕ್ತಿ ತಂದ 371 ಜೆ ವಿಶೇಷ ಸ್ಥಾನಮಾನಕ್ಕೆ 10 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಡಿ.10 ರಂದು ದೊಡ್ಡ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಇಂದು ನಮ್ಮ ಎಲ್ಲ ನಾಯಕರ ಜತೆ ಚರ್ಚೆ ಮಾಡಲಾಗಿದೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ತಮ್ಮ ಜನ್ಮ ಭೂಮಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ನಾವು ಅವರಿಗೆ ಅಭಿನದನೆ ಸಲ್ಲಿಸಬೇಕು. ಇಂತಹ ಹಲವು ಹೋರಾಟಗಳ ಮೂಲಕ ಇಂದು ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ ಎಂದು ಅವರು ಹೇಳಿದರು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತಿತರರು ಉಪಸ್ಥಿತರಿದ್ದರು.

Similar News