ದೇಶದಲ್ಲಿ ಏಪರೂಪ ನಾಗರಿಕ ಸಂಹಿತೆ ಜಾರಿ ಅಸಾಧ್ಯ: ಎಚ್.ಡಿ. ದೇವೇಗೌಡ

''ಇದನ್ನು ಜಾರಿ ಮಾಡಲು ಹೊರಟರೆ...''

Update: 2022-12-01 15:05 GMT

ಮೈಸೂರು,ಡಿ.1: 'ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅಸಾಧ್ಯ, ನಮ್ಮ ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (H. D. Deve Gowda) ಹೇಳಿದ್ದಾರೆ. 

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಬಿಜೆಪಿಗೆ ಲಾಭ ಆಗುತ್ತೋ ಬಿಡುತ್ತೋ ಅನ್ನೋ ಪ್ರಶ್ನೆ ಅಲ್ಲ, ಇದನ್ನು ಜಾರಿ ಮಾಡಲು ಹೊರಟರೆ ವ್ಯಾಪಕ ವಿರೋಧ ವ್ಯಕ್ತವಾಗುತ್ತದೆ. ಸಂವಿಧಾನದಲ್ಲಿ ಏನಿದೆಯೋ ಅದಕ್ಕೆ ನಾವು ಬದ್ಧ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ನನ್ನ ವಿರೋಧವಿದೆ'' ಎಂದರು.

''ಮೇಕೆದಾಟು ಯೋಜನೆ ಅನಿಷ್ಠಾನಕ್ಕೆ ಪ್ರಧಾನಿ ಮೋದಿ ಅನುಮತಿ ನೀಡಲಿಲ್ಲ, ಮೇಕೆದಾಟುಗೆ ಅವಕಾಶ ಕೊಡದ ಮೋದಿ ಸಮುದ್ರಕ್ಕೆ ಹರಿದು ಹೋಗುವ ನೀರು ಬಳಸಲು ಅನುಮತಿ ಕೊಡುತ್ತಾರೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು. 

''ಮೇಕೆದಾಟು ಯೋಜನೆಗೆ ಮೋದಿ ಅನುಮತಿ ನೀಡಲಿಲ್ಲ‌. ತಮಿಳುನಾಡು ಸರ್ಕಾರ ಸಮುದ್ರಕ್ಕೆ ಹರಿಯುವ ಕಾವೇರಿ ನೀರು ಬಳಸೋಕೆ ಅನುಮತಿ ಕೊಟ್ಟಿದ್ದಾರೆ‌. ಸೇಲಂ ಜಿಲ್ಲೆ ಸೇರಿದಂತೆ ಆಸುಪಾಸಿನ ಜಿಲ್ಲೆಗಳ 4 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಗೆ ಈ ನೀರು ಬಳಕೆ ಮಾಡಲಾಗುತ್ತಿದೆ. ತಮಿಳುನಾಡಿನ ಎಐಎಡಿಎಂಕೆ ಪಕ್ಷದೊಂದಿಗೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ. ಮುಂದಿನ‌ ದಿನಗಳಲ್ಲಿ ಎಐಎಡಿಎಂಕೆಗೆ ಅನುಕೂಲವಾಗಲಿ ಅಂತಾನೇ ಅಲ್ಲಿನ ನೀರಾವರಿ ಯೋಜನೆಗೆ ಮೋದಿ ಅನುಮತಿ ಕೊಟ್ಟಿದ್ದಾರೆ'' ಎಂದು ಆರೋಪಿಸಿದರು. 

''ಈ ವಿಚಾರವನ್ನು ಇಲ್ಲಿಗೇ ಬಿಡುವುದಿಲ್ಲ. ಮೇಕೆದಾಟು ವಿಚಾರವಾಗಿ ಬಹಳ ಹಿಂದೆಯೇ ಪ್ರಧಾನಿಗೆ ಪತ್ರ ಬರೆದಿದ್ದೆ.ಆ ಪತ್ರಕ್ಕೆ ಇಲ್ಲಿಯ ತನಕ ಪ್ರತಿಕ್ರಿಯೆ ನೀಡಿಲ್ಲ. ಮುಂಬರುವ ರಾಜ್ಯಸಭೆ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸುತ್ತೇನೆ'' ಎಂದು ತಿಳಿಸಿದ್ದಾರೆ.

Similar News