ಚಿಲುಮೆ ಸಂಸ್ಥೆ ಹಗರಣ: ಮೂವರಿಗೆ ನ್ಯಾಯಾಂಗ ಬಂಧನ, ಇಬ್ಬರು ಪೊಲೀಸ್ ಕಸ್ಟಡಿಗೆ

Update: 2022-12-01 15:29 GMT

ಬೆಂಗಳೂರು, ಡಿ. 1: ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆ ಹಗರಣ ಸಂಬಂಧ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ, ಮತ್ತಿಬ್ಬರನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಇಲ್ಲಿನ ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿತ ಚಿಲುಮೆ ಸಂಸ್ಥೆಯ ಸಿಬ್ಬಂದಿಗಳಾದ ಧರ್ಮೇಶ್, ರೇಣುಕಾ ಪ್ರಸಾದ್, ಅನಿಲ್ ಕುಮಾರ್ ಹಾಗೂ ಮಾರುತಿ ಗೌಡ, ಅಭಿಷೇಕ್‍ನನ್ನು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಆನಂತರ, ಈಗಾಗಲೇ ಈಗಾಗಲೇ ಎಂಟು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದ ಧರ್ಮೇಶ್, ರೇಣುಕಾ ಪ್ರಸಾದ್, ಅನಿಲ್ ಕುಮಾರ್‍ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಮಾರುತಿ ಗೌಡ, ಅಭಿಷೇಕ್‍ನನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ತನಿಖಾಧಿಕಾರಿವೊಬ್ಬರು, ಸಂಸ್ಥೆಯ ಮುಖ್ಯಸ್ಥ, ಬಂಧಿತ ಆರೋಪಿ ರವಿಕುಮಾರ್ ಆಪ್ತರಾದ ಅಭಿಷೇಕ್ ಹಾಗೂ ಮಾರುತಿಗೌಡ ಅವರನ್ನು ಹೆಚ್ಚಿನ ವಿಚಾರಣೆ ನಡೆಸಲಿದ್ದೇವೆ.ಅಲ್ಲದೆ, ಬಿಬಿಎಂಪಿಯ ಕಂದಾಯ ಅಧಿಕಾರಿಗಳಿಗೆ ಮಾರುತಿಯೇ ರವಿಕುಮಾರ್ ಅವರನ್ನು ಪರಿಚಯಿಸಿಕೊಟ್ಟಿದ್ದರು ಎಂದರು.

ಈಗಾಗಲೇ ಮಾರುತಿ ಮನೆಯಲ್ಲಿ ಶೋಧ ನಡೆಸಿದ್ದು, ಸಂಸ್ಥೆಗೆ ಸೇರಿದ್ದ ಎರಡು ಮೊಬೈಲ್, ಲ್ಯಾಪ್‍ಟಾಪ್ ಹಾಗೂ ದಾಖಲೆಗಳು ಲಭಿಸಿವೆ. ಅವುಗಳನ್ನು ವಶಕ್ಕೆ ಪಡೆಯಲಾಗಿದೆ.ಇನ್ನೂ, ತಲೆಮರೆಸಿಕೊಂಡಿದ್ದ ಅಭಿಷೇಕ್‍ನನ್ನು ಬೆಳಗಾವಿಯಲ್ಲಿ ಬಂಧಿಸಲಾಯಿತು ಎಂದರು.

ಮತದಾರರ ವೈಯಕ್ತಿಕ ಮಾಹಿತಿ ಕಳವು ಹಾಗೂ ದುರ್ಬಳಕೆ ಪ್ರಕರಣದಲ್ಲಿ ಚಿಲುಮೆ ಸಂಸ್ಥೆಗೆ ಸಹಾಯ ಮಾಡಿದ್ದ ಹಾಗೂ ಸಂಸ್ಥೆಯೊಂದಿಗೆ ಸೇರಿಕೊಂಡು ಅಕ್ರಮ ಎಸಗಿದ್ದ ಆರೋಪ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 15ಕ್ಕೇರಿದೆ.

Similar News