ರಮೇಶ್ ಜಾರಕಿಹೊಳಿಯಿಂದ 850 ಕೋಟಿ ರೂ.ವಂಚನೆ ಆರೋಪ | ಹಣ ಪಾವತಿಸದಿದ್ದರೆ ಹೈಕೋರ್ಟ್‍ಗೆ ವರದಿ: ಲಕ್ಷ್ಮಣ್ ಎಚ್ಚರಿಕೆ

Update: 2022-12-01 15:43 GMT

ಬೆಂಗಳೂರು, ಡಿ. 1: ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಒಡೆತನದ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆಯು ಒಟ್ಟು 9 ವಿವಿಧ ಬ್ಯಾಂಕುಗಳಲ್ಲಿ 850 ಕೋಟಿ ರೂ.ಸಾಲ ಪಡೆದು ವಂಚಿಸಿದ್ದು, ಸದರಿ ಹಣವನ್ನು ಪಾವತಿಸದಿದ್ದರೆ ಅಗತ್ಯ, ದಾಖಲೆಗಳೊಂದಿಗೆ ಹೈಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆ ದಿವಾಳಿ ಹಂತದಲ್ಲಿದೆ. ಸಹಕಾರಿ ಬ್ಯಾಂಕ್‍ಗಳು ಅಪೆಕ್ಸ್ ಬ್ಯಾಂಕ್‍ಗೆ ಪತ್ರ ಬರೆದು, ಕಾರ್ಖಾನೆ ದಿವಾಳಿಯಾಗಿದೆ ಎಂದು ಹೇಳಿದೆ. ಆದರೆ, ಕಾರ್ಖಾನೆ ವಿವಿಧ ಬ್ಯಾಂಕ್‍ಗಳಿಗೆ ಪಡೆದಿರುವ 850 ಕೋಟಿ ರೂ.ಸಾಲ ಮರುಪಾವತಿ ಮಾಡಬೇಕು ಎಂದು ವಿವರ ನೀಡಿದರು. 

[ಎಂ. ಲಕ್ಷ್ಮಣ್ - ಕೆಪಿಸಿಸಿ ವಕ್ತಾರರು]


‘ಇನ್ನು ಎಥೆನಾಲ್ ಘಟಕ ನಿರ್ಮಿಸುವ ಹೆಸರಿನಲ್ಲಿ ಪಡೆದ 60ಕೋಟಿ ರೂ.ಸಾಲದ ಹಣ ಮಹಾರಾಷ್ಟ್ರದ ಮಿಷನರಿ ಕಂಪೆನಿಯಿಂದ ರಮೇಶ್ ಜಾರಕಿಹೊಳಿಯವರ ಬೇನಾಮಿ ಖಾತೆಗೆ ಸಂದಾಯವಾಗಿದೆ. ನಷ್ಟದ ನೆಪದಲ್ಲಿ ಕಾರ್ಖಾನೆ ಮಾರಾಟಕ್ಕೆ ಯೋಜನೆ ರೂಪಿಸಲಾಗಿದ್ದು, ಸಾಲ ಪಡೆದ ಬ್ಯಾಂಕುಗಳಿಗೆ ವಂಚನೆ ಮಾಡಲು ಸಂಚು ನಡೆದಿದೆ. ಇದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಬೊಮ್ಮಾಯಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭಾಗಿಯಾಗಿದ್ದಾರೆ. ಒಂದು ವೇಳೆ ರಮೇಶ್ ಕಾಂಗ್ರೆಸ್, ಜೆಡಿಎಸ್‍ನಲ್ಲಿದ್ದಿದ್ದರೆ ಬಿಡುತ್ತಿದ್ದರೇ? ಎಂದು ಅವರು ಪ್ರಶ್ನಿಸಿದರು.

ಇಷ್ಟೆಲ್ಲಾ ಆದರೂ ಸರಕಾರ ಯಾವುದೇ ರೀತಿಯಲ್ಲಿಯೂ ತಲೆಕೆಡಿಸಿಕೊಂಡಿಲ್ಲ. ಈ ಬಗ್ಗೆ ವರದಿಯನ್ನೂ ನೀಡದ ಸರಕಾರ, ಕಾರ್ಖಾನೆ ಮತ್ತು ರೈತರ ಬಗ್ಗೆ ಕಾಳಜಿ ವಹಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ದಾಖಲೆಯ ಸಮೇತ ಹೈಕೋರ್ಟ್‍ಗೆ ವಿಚಾರವನ್ನು ತೆಗೆದುಕೊಂಡು ಹೋಗಲಾಗುತ್ತದೆ. ಆದುದರಿಂದ ಕಾರ್ಖಾನೆಯನ್ನು ಮಾರಾಟ ಮಾಡದೆ ಉಳಿಸಿಕೊಳ್ಳುವುದು ಸರಕಾರದ ಜವಾಬ್ದಾರಿ ಎಂದು ಅವರು ಆಗ್ರಹಿಸಿದರು.

Similar News